ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ರಾಜ್ಯಮಟ್ಟದ ವ್ಯಕ್ತಿತ್ವ ವಿಕಸನ ಶಿಬಿರ ʻಯುರೇಕಾ-2026′

0
8

ಶಿಬಿರದ ಐದು ಹಾಗೂ ಆರನೇ ದಿನ ಹಲವು ವಿಷಯಾಧಾರಿತ ಅವಧಿಗಳಲ್ಲಿ ಶಿಬಿರಾರ್ಥಿಗಳು ಭಾಗಿ

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಎಸ್. ಎಸ್. ಎಲ್. ಸಿ. ವಿದ್ಯಾರ್ಥಿಗಳಿಗಾಗಿ ನಡೆಯುತ್ತಿರುವ ರಾಜ್ಯಮಟ್ಟದ ವ್ಯಕ್ತಿತ್ವ ವಿಕಸನ ಶಿಬಿರ ʻಯುರೇಕಾ-2026ʼ ರ 5ನೇಹಾಗೂ 6ನೇದಿನಗಳಲ್ಲಿ ವಿವಿಧ ವಿಷಯಾಧಾರಿತ ಅವಧಿಗಳನ್ನು ಆಯೋಜಿಸಲಾಗಿದ್ದು ಶಿಬಿರಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ತಮ್ಮ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಹೊಸ ಅನುಭವ ಹಾಗೂ ಅವಕಾಶಗಳನ್ನುಪಡೆದುಕೊಂಡರು.

ಶಿಬಿರದ 5ನೇ ದಿನದ ಮೊದಲ ಅವಧಿಯನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಜೀವಶಾಸ್ತ್ರ ವಿಭಾಗದ ಉಪನ್ಯಾಸಕರಾದ ಡಾ. ಸುಶಾಂತ್ ವಿ. ರೈ ಇವರು ʻUnderstanding Life in Its Fullnessʼ ಶೀರ್ಷಿಕೆಯಡಿ ನಡೆಸಿಕೊಟ್ಟರು. ಈ ಅವಧಿಯಲ್ಲಿ ಜೀವಿಗಳ ಉಗಮ, ವಿಕಾಸ ಹಾಗೂ ಪರಿಸರದೊಂದಿಗೆ ಅವುಗಳ ಅವಿನಾಭಾವ ಸಂಬಂಧವನ್ನು ವಿವರವಾಗಿ ವಿಶ್ಲೇಷಿಸಿದರು.

ಜೀವನದ ವೈಜ್ಞಾನಿಕ ಹಾಗೂ ತಾತ್ವಿಕ ಆಯಾಮಗಳನ್ನು ಸಮಗ್ರವಾಗಿ ಪರಿಚಯಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ವಿಷಯದ ಕುರಿತು ಸಮಗ್ರ ಅರಿವು ಮೂಡಿಸಲಾಯಿತು. ಎರಡನೇ ಅವಧಿಯಲ್ಲಿ ವಿದ್ಯಾರ್ಥಿಗಳು ಕಾಲೇಜಿನ ಜೀವಶಾಸ್ತ್ರ ಹಾಗೂ ರಾಸಾಯನಶಾಸ್ತ್ರ ಪ್ರಯೋಗಾಲಯಗಳಿಗೆ ಭೇಟಿ ನೀಡಿ ಕಾಲೇಜಿನ ಉಪನ್ಯಾಸಕ ವೃಂದದವರ ಮಾರ್ಗದರ್ಶನದಲ್ಲಿ ತಾವು ಸ್ವತಃ ಪ್ರಯೋಗಗಳಲ್ಲಿ ಭಾಗಿಯಾಗುವುದರೊಂದಿಗೆ ಪ್ರಾಯೋಗಿಕ ಹಾಗೂ ನೇರ ಅನುಭವಗಳನ್ನು ಪಡೆಯುವ ಮೂಲಕ ತಮ್ಮ ವೈಜ್ಞಾನಿಕ ಅರಿವನ್ನು ವಿಸ್ತೃತಗೊಳಿಸಿದರು. ಅಪರಾಹ್ನ ಬಳಿಕ ಶಿಬಿರಾರ್ಥಿಗಳು ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯ, ಪುತ್ತೂರು ಇಲ್ಲಿನ Ioಖಿ ಪ್ರಯೋಗಾಲಯಕ್ಕೆ ಭೇಟಿ ನೀಡಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿಗಳನ್ನು ಪ್ರಾತ್ಯಕ್ಷಿಕೆಗಳ ಮೂಲಕ ಅರಿತುಕೊಂಡರು.

ಶಿಬಿರದ ಆರನೇ ದಿನದ ಮೊದಲನೇ ಅವಧಿಯುʻMathematics – The Language of Precision and Patterns’ ಶೀರ್ಷಿಕೆಯಡಿ ಆಯೋಜನೆಗೊಂಡಿದ್ದು, ಗಣಿತವು ಕೇವಲ ಅಂಕಿ – ಸಂಖ್ಯೆಗಳ ಲೆಕ್ಕಾಚಾರ ಮಾತ್ರವಾಗಿರದೆ, ಪ್ರತಿಯೊಂದು ಕ್ಷೇತ್ರದಲ್ಲೂ ಅಡಕವಾಗಿರುವ ನಿಖರ, ನಿಯಮಬದ್ಧ ಮಾದರಿಗಳ ಸಾರ್ವತ್ರಿಕ ಭಾಷೆಯಾಗಿದೆ ಎನ್ನುವುದನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಗಣಿತಶಾಸ್ತ್ರ ವಿಭಾಗ ಮುಖ್ಯಸ್ಥರಾದ ಕವಿತಾ ಇವರು ಶಿಬಿರಾರ್ಥಿಗಳಿಗೆ ಅರ್ಥೈಸಿದರು.

ನಂತರ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗ ಉಪನ್ಯಾಸಕರಾದಶ್ರೀಧರ ಶೆಟ್ಟಿಗಾರ್ ಇವರು ʻನಿತ್ಯ ಜೀವನದಲ್ಲಿ ವಾಣಿಜ್ಯಶಾಸ್ತ್ರ’ ಎಂಬ ವಿಷಯದ ಕುರಿತು ಅವಧಿಯನ್ನು ನಡೆಸಿಕೊಟ್ಟರು. ಹಲವು ದೈನಂದಿನ ಉದಾಹರಣೆಗಳು, ಗುಂಪು ಚರ್ಚೆಗಳು ಹಾಗೂ ವಿನೋದಮಯ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆರ್ಥಿಕ ಹಾಗೂ ವ್ಯಾವಹಾರಿಕ ಜ್ಞಾನವನ್ನು ವಿಸ್ತರಿಸುವುದರ ಜೊತೆಗೆ ನಿತ್ಯ ಜೀವನದಲ್ಲಿ ಹಾಸು ಹೊಕ್ಕಾಗಿರುವ ವಾಣಿಜ್ಯ ಶಾಸ್ತ್ರದ ಅನ್ವಯ ಹಾಗೂ ಅದರ ಮಹತ್ವವನ್ನು ಮನದಟ್ಟು ಮಾಡಿದರು. ಈ ಎಲ್ಲಾ ಅವಧಿಗಳಲ್ಲಿ ಶಿಬಿರಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಉಪಸ್ಥಿತರಿದ್ದು, ಶಿಬಿರಾರ್ಥಿಗಳಿಗೆ ಸಂಪೂರ್ಣ ಮಾರ್ಗದರ್ಶನ ಹಾಗೂ ಸಹಕಾರ ನೀಡಿದರು.

LEAVE A REPLY

Please enter your comment!
Please enter your name here