ಕಾರ್ಕಳದ ಗೊಮ್ಮಟೇಶ್ವರ ಬೆಟ್ಟದ ಲ್ಲಿರುವ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾ ಮಸ್ತಕಾಭಿಷೇಕ ಮಹೋತ್ಸವವು 2027ರ ಫೆಬ್ರವರಿಯಲ್ಲಿ ಜರಗಲಿದೆ ಎಂದು ಮಹಾಮಸ್ತಕಾಭಿ ಷೇಕ ಸಮಿತಿಯ ಕಾರ್ಯಾಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ಎ. 12ರಂದು ಕಾರ್ಕಳದ ದಾನ ಶಾಲೆಯಲ್ಲಿರುವ ಸಮಿತಿಯ ಕಾರ್ಯಾಲ ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮಹಾಮಸ್ತಕಾಭಿಷೇಕದ ಪೂರ್ವಭಾವಿಯಾಗಿ ೧೯ರಂದು ಸಮಿತಿಯ ಕಾರ್ಯಾಲಯ ಉದ್ಘಾಟನೆ ಹಾಗೂ ಮಹೋತ್ಸವ ದಿನಾಂಕ ಘೋಷಣೆ ನಡೆಯಲಿದೆ ಎಂದು ತಿಳಿಸಿದರು.
ಕಾರ್ಕಳ ಶ್ರೀ ಜೈನ ಮಠದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಸಾನಿಧ್ಯ ಮತ್ತು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಮಹೋತ್ಸವದ ಸಿದ್ಧತೆಗಳು ಈಗಾಗಲೇ ಆರಂಭಗೊಂಡಿವೆ ಎಂದರು.
ಎ. 19ರಂದು ಬೆಳಗ್ಗೆ 10-30ಕ್ಕೆ ದಾನಶಾಲೆ ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ಕಾರ್ಯಾಲಯ ಉದ್ಘಾಟ ನೆಗೊಳ್ಳಲಿದೆ. ಡಾ| ಹೆಗ್ಗಡೆಯವರು ಮಹಾಮಸ್ತಕಾಭಿಷೇಕದ ದಿನಾಂಕ ಘೋಷಿಸಲಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರ್ಯಾಲಯ ಉದ್ಘಾಟಿಸಲಿದ್ದು, ಸಚಿವ ಡಿ. ಸುಧಾಕರ್ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಸಮಿತಿ ಕಾರ್ಯಾಧ್ಯಕ್ಷ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕೋಟ ಶ್ರೀವಾಸ ಪೂಜಾರಿ, ಶಾಸಕ ಸುನಿಲ್ ಕುಮಾರ್, ಅದಾನಿ ಗ್ರೂಪ್‌ನ ದಕ್ಷಿಣ ಭಾರತದ ಅಧ್ಯಕ್ಷ ಕಿಶೋರ್ ಆಳ್ವ, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಸಮಿತಿ ಉಪಾಧ್ಯಕ್ಷ ಅಭಯಚಂದ್ರ ಜೈನ್, ಉದಯಕುಮಾರ್ ಶೆಟ್ಟಿ ಮುನಿಯಾಲು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಮಹೋತ್ಸವದ ಹಿನ್ನೆಲೆಯಲ್ಲಿ ಕಾರ್ಕಳ ಪಟ್ಟಣದ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಭಕ್ತರಿಗೆ ವ್ಯವಸ್ಥೆ ಕಲ್ಪಿಸಲು ಒಟ್ಟು 82,37,25,೦೦೦ ರೂ. ಅಂದಾಜು ಪಟ್ಟಿಯ ಪ್ರಸ್ತಾವನೆ ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದೆ. 2015ರಲ್ಲಿ ಸಿದ್ದರಾಮಯ್ಯನವರ ಸರಕಾರ ಹೆಚ್ಚಿನ ಅನುದಾನ ನೀಡಿ ಸಹಕರಿಸಿದ್ದರು.
ಕಾರ್ಯಕ್ರಮದ ಯಶಸ್ಸಿಗಾಗಿ ಹಲವು ಸಮಿತಿ ರಚನೆ ಮಾಡಲಾಗುತ್ತಿದೆ. 10 ದಿನಗಳ ಕಾರ್ಯಕ್ರಮ ವ್ಯಸ್ಥಿತವಾಗಿ ಆಯೋಜನೆಗೊಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದರು.
ಈಗಾಗಲೇ ಸರಕಾರವು ಮೊದಲ ಕಂತಾಗಿ ೧.೫೯ ಕೋ.ರೂ.ಮಂಜೂರು ಮಾಡಿದ್ದು, ಅದರಲ್ಲಿ 1,19,25,೦೦೦ ರೂ. ಬಿಡುಗಡೆಯಾಗಿದೆ. ಈ ಅನುದಾನ ದಲ್ಲಿ ಅಟ್ಟಳಿಗೆ ನಿರ್ಮಾಣ (37.50ಲಕ್ಷ ರೂ.), ತ್ಯಾಗಿ ಭವನ ಹಾಗೂ ಮಾತಾಜಿ ಭವನ ನವೀಕರಣ (63.75 ಲಕ್ಷ ರೂ.), ಸಭಾಂಗಣದ ನವೀಕರಣ (8.25 ಲಕ್ಷ ರೂ.) ಹಾಗೂ ಗೊಮ್ಮಟ ಬೆಟ್ಟಕ್ಕೆ ನೀರಿನ ಸರಬರಾಜು ವ್ಯವಸ್ಥೆ (9.75 ಲಕ್ಷರೂ.) ಕಾಮಗಾರಿ ಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ವಿವರಿಸಿದರು.
ಲಲಿತಕೀರ್ತಿ ಭಟ್ಟಾರಕ ಶ್ರೀಗಳು, ಸಮಿತಿಯ ಪ್ರ. ಕಾರ್ಯದರ್ಶಿ ಪುಷ್ಪರಾಜ್ ಜೈನ್, ಸಹ ಕೋಶಾಧಿಕಾರಿ ಪ್ರಭಾತ್ ಕುಮಾರ್, ಉಪಾಧ್ಯಕ್ಷರಾದ ಅನಂತರಾಜ ಪೂವಣಿ, ಸಂಪತ್ ಸಾಮ್ರಾಜ್ಯ, ಸುದಿರ್ ಪಡಿವಾಳ್, ಜಯಕೀರ್ತಿ ಕಡಂಬ, ಕಾರ್ಯದರ್ಶಿ ಗಳಾದ ಹೇಮಚಂದ್ರ ಜೈನ್, ಸುನಿಲ್ ಕುಮಾರ್ ಬಜಗೋಳಿ ಮೊದಲಾದವರು ಉಪಸ್ಥಿತರಿದ್ದರು.

