ಸನಾತನ ಹಿಂದೂ ಸಂಸ್ಕೃತಿಯ ಸಂರಕ್ಷಣೆ – ಸಂವರ್ಧನೆಗಾಗಿ ಶ್ರೀಪುತ್ತಿಗೆ ಸುಗುಣ ಶಿಬಿರ

0
12

ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಶ್ರೀ ಪುತ್ತಿಗೆ ಮಠದ ವಿಶ್ವಮಾನ್ಯ ಯತಿಕುಲ ಚಕ್ರವರ್ತಿ ಶ್ರೀಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತವರ ಶಿಷ್ಯ ಶ್ರೀಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದಂಗಳವರ ಮಾರ್ಗದರ್ಶನ ಮತ್ತು ದಿವ್ಯ ಉಪಸ್ಥಿತಿಯಲ್ಲಿ ಸಮಸ್ತ ಹಿಂದೂ ಬಾಂಧವರಿಗಾಗಿ ಉಡುಪಿ ಗೀತಾಮಂದಿರದಲ್ಲಿ ಶ್ರೀಪುತ್ತಿಗೆ ಸುಗುಣ ಶಿಬಿರವನ್ನು ಮೊಟ್ಟಮೊದಲ ಬಾರಿಗೆ ಆಯೋಜಿಸಲಾಗುತ್ತಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ. ಏಪ್ರಿಲ್ 20ರಿಂದ ಮೊದಲ್ಗೊಂಡು ಏಪ್ರಿಲ್ 30ರವರೆಗೆ ಪ್ರತಿದಿನ ಅಪರಾಹ್ನ 2.00ರಿಂದ ಸಂಜೆ 5.30ರವರೆಗೆ ನಡೆಯಲಿರುವ ಈ ಶಿಬಿರದ ಉದ್ಘಾಟನಾ ಸಮಾರಂಭವು ಏಪ್ರಿಲ್ 19ರಂದು ಅಪರಾಹ್ನ 3 ಗಂಟೆಯಿಂದ ನಡೆಯಲಿದ್ದು ಶ್ರೀಪಾದದ್ವಯರ ದಿವ್ಯ ಉಪಸ್ಥಿತಿಯಲ್ಲಿ, ಪರ್ಯಾಯ ಶ್ರೀಶೀರೂರು ಶ್ರೀಕೃಷ್ಣ ಮಠದ ಶ್ರೀಶ್ರೀ ವೇದವರ್ಧನತೀರ್ಥ ಶ್ರೀಪಾದರು ಉದ್ಘಾಟನೆಗೈಯಲ್ಲಿದ್ದಾರೆ.

ಉಡುಪಿ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಯಶಪಾಲ್ ಸುವರ್ಣ, ರಾಷ್ಟ್ರ ಪ್ರಶಸ್ತಿ ವಿಜೇತ ನಟ-ನಿರ್ದೇಶಕ ರಿಷಭ್ ಶೆಟ್ಟಿ, ಕಾಪು ಹೊಸ ಮಾರಿಗುಡಿ ಕ್ಷೇತ್ರದ ರಾಜರ್ಷಿ ವಾಸುದೇವ ಶೆಟ್ಟಿ ಮತ್ತು ಮಂಗಳೂರು ಶ್ರೀನಿವಾಸ ಯುನಿವರ್ಸಿಟಿಯ ಕುಲಾಧಿಪತಿ ಡಾ। ಶ್ರೀನಿವಾಸ ರಾವ್ ಭಾಗವಹಿಸಲಿದ್ದಾರೆ. ಸಮಗ್ರ ಶಿಬಿರಕ್ಕೆ ಭಾರತೀಯ ಸಂತ ಮಹಾಪರಿಷತ್, ವಿಶ್ವಹಿಂದೂ ಪರಿಷತ್, ಸಂಸ್ಕಾರ ಭಾರತಿ, ಕುಟುಂಬ ಪ್ರಬೋಧನ ಸಮಿತಿ ಮತ್ತು ಪತಂಜಲಿ ಯೋಗ ಸಮಿತಿಗಳ ಉಡುಪಿ ಘಟಕಗಳು ಸಹಯೋಗ ನೀಡಲಿವೆ. ಈ ಶಿಬಿರದಲ್ಲಿ 5 ವರ್ಷ ವಯೋಮಿತಿಯಿಂದ 60 ವರ್ಷ ಮೇಲ್ಪಟ್ಟವರೆಗೂ ಐದು ವಿಭಾಗಗಳಲ್ಲಿ ತರಗತಿಗಳನ್ನು ನಡೆಸಲಾಗುತ್ತದೆ.

ಸರಳ ನಿತ್ಯ-ವಿಧಿಗಳು, ಹಿಂದೂ ಆಚಾರ-ವಿಚಾರಗಳು, ಹಾಡು, ಭಜನೆ, ಕಲೆ, ಹೂ ಕಟ್ಟುವುದು, ರಂಗವಲ್ಲಿ, ವಿವಿಧ ಆಟಗಳು, ಕರ-ಕುಶಲ, ಹಬ್ಬ-ಹರಿದಿನಗಳ ಮಾಹಿತಿ, ಉಪನ್ಯಾಸಗಳು ಹಾಗೂ ಸಾಧಕ-ಸಂವಾದ ವಿಭಾಗಗಳಿರುತ್ತವೆ. ಯಾವುದೇ ವಯೋಮಾನದ ಹಿಂದೂ ಬಾಂಧವರು ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂಬುದಾಗಿ ಶಿಬಿರ ಸಮಿತಿ ಮತ್ತು ಶ್ರೀಮಠದ ಪ್ರಕಟಣೆ ತಿಳಿಸಿದೆ.

ಒಟ್ಟು ಹತ್ತು ದಿನಗಳ ಕಾಲ ನಡೆಯಲಿರುವ ಈ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ವಿದ್ವಾಂಸರಾದ ವೇದವ್ಯಾಸ ಪುರಾಣಿಕ ಡಾ। ಸುನೀಲ ಆಚಾರ್ಯ, ಕೆ ವಿ ರಮಣಾಚಾರ್ಯ, ವಿಕ್ರಮ್ ಕುಂಟಾರ್, ಸಮರ್ಥ ಜೋಷಿ, ರಾಘವೇಂದ್ರ ಆಚಾರ್ಯ, ರಾಘವೇಂದ್ರ ಭಟ್, ವಿ| ಉಷಾ ಹೆಬ್ಬಾರ್, ಸರಸ್ವತಮ್ಮ, ಸರೋಜಕ್ಕ, ಸುಮಿತ್ರ ಕೆರೆಮಠ, ಜಯಂತ ಮಲ್ಪೆ ಮತ್ತಿತರರು ತರಬೇತಿ ನೀಡಲಿದ್ದಾರೆ. ಶಿಬಿರದಲ್ಲಿ ಹಬ್ಬ ಹರಿದಿನಗಳು ಎನ್ನುವ ವಿಚಾರದಲ್ಲಿ ಯುಗಾದಿ, ನಾಗರ ಪಂಚಮಿ, ಚೌತಿ, ಶ್ರೀ ಕೃಷ್ಣ ಜನ್ಮಾಷ್ಟಮಿ, ನವರಾತ್ರಿ, ನರಸಿಂಹ ಜಯಂತಿ, ತುಳಸೀಪೂಜೆ-ದೀಪಾವಳಿ-ಗೋಪೂಜೆ ಸಹಿತ ಕಾರ್ತಿಕ ಮಾಸ, ಗೀತಾ ಜಯಂತಿ, ಏಕಾದಶಿ ಮುಂತಾದ ಪರ್ವ ದಿನಗಳ ಕುರಿತಂತೆ ವಿದ್ವಾಂಸರಿಂದ ಪ್ರವಚನ ಏರ್ಪಡಿಸಲಾಗಿದೆ.

ವಿದ್ವಾಂಸರಾದ ಮಹಾ ಮಹೋಪಾಧ್ಯಾಯ ಶತಾವಧಾನಿ ಡಾ। ಉಡುಪಿ ರಾಮನಾಥ ಆಚಾರ್ಯ, ವಿ। ಸಗ್ರಿ ಆನಂದತೀರ್ಥ ಉಪಾಧ್ಯಾಯ, ವಿ| ಷಣ್ಮುಖ ಹೆಬ್ಬಾರ್, ಡಾ. ಸುನೀಲ ಆಚಾರ್ಯ, ವಿ। ಸುಧೀಂದ್ರ ಆಚಾರ್ಯ ಮುಂತಾದವರು ಹಬ್ಬಗಳ ಆಚರಣೆಗಳ ವಿಧಿ-ವಿಧಾನಗಳ ಬಗ್ಗೆ ತಿಳಿಸಿಕೊಡಲಿದ್ದಾರೆ. ಪ್ರತಿದಿನ ಸಂಜೆ 4 ರಿಂದ 5 ರವರೆಗೆ ನಡೆಯುವ ಈ ವಿಶೇಷ ಉಪನ್ಯಾಸದಲ್ಲಿ ಶಿಬಿರಾರ್ಥಿಗಳಲ್ಲದೆ ಸಾರ್ವಜನಿಕರು ಭಾಗವಹಿಸಬಹುದಾಗಿದೆ. ಇದರೊಂದಿಗೆ ಸಾಧಕ-ಸಂವಾದ ಎನ್ನುವ ಇನ್ನೊಂದು ಅವಧಿಯನ್ನು ಸಂಜೆ 5 ರಿಂದ 5:45 ರವರೆಗೆ ಹಮ್ಮಿಕೊಳ್ಳಲಾಗಿದ್ದು, ವಿವಿಧ ಕ್ಷೇತ್ರಗಳ ಸಾಧಕರ ಜೊತೆ ಮುಖಾಮುಖಿ ಪ್ರಶ್ನೋತ್ತರ ಹಮ್ಮಿಕೊಳ್ಳಲಾಗಿದೆ.

ಇದರಲ್ಲಿ ಡಾ. ಶ್ರುತಿ ಬಲ್ಲಾಳ್, ಡಾ। ಎಂ. ಮೋಹನ ಆಳ್ವ, ಡಾ। ರಾಮಕೃಷ್ಣ ಆಜಾರ್, ಡಾ। ಬಿ. ಗೋಪಾಲಾಚಾರ್ಯ, ಡಾ ವಿಜಯೇಂದ್ರ ವಸಂತ್, ಡಾ। ಸುಧೀರ್ ರಾಜ್, ಶ್ರೀ ವಾದಿರಾಜ, ಶ್ರೀ ರತ್ನಾಕರ ಇಂದ್ರಾಳಿ ಮುಂತಾದ ಸಾಧಕರು ವಿವಿಧ ವಿಚಾರಗಳ ಕುರಿತಂತೆ ಮಾಹಿತಿ ನೀಡಿ ಪ್ರೇಕ್ಷಕರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಏಪ್ರಿಲ್ 30ರಂದು ಹಿರಿಯಡ್ಕದಲ್ಲಿರುವ ಶ್ರೀ ಪುತ್ತಿಗೆ ಮೂಲಮಠದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ ಶಿಬಿರ ಸಂಚಾಲಕರಾದ ಶ್ರೀ ರಮೇಶ್ ಭಟ್: 9880835626 ಅಥವಾ ವಿ| ಕೆ. ವಿ. ರಮಣಾಚಾರ್ಯ: 8792158946 ಅಥವಾ ಶ್ರೀ ಕಿರಣ್ ಭಟ್: 9663891702 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here