ರಾಯಚೂರು : ಜಿಲ್ಲೆಯ ಮಾನ್ವಿ ತಾಲೂಕಿನ ಬೈಲ್ ಮರ್ಚಡ್ ಗ್ರಾಮದಲ್ಲಿ ನಡೆದ ದುರ್ಘಟನೆಯಲ್ಲಿ ಸಮುದಾಯ ಭವನದ ಸಿಮೆಂಟ್ ನಾಮಫಲಕ ಕುಸಿದು ಬಿದ್ದು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಹಿತಿಯ ಪ್ರಕಾರ, ಗ್ರಾಮದಲ್ಲಿ ನಡೆದ ಬಯಲಾಟ ವೀಕ್ಷಣೆಯ ವೇಳೆ ಸಮುದಾಯ ಭವನದ ಬಳಿ ಜನರು ಕುಳಿತಿದ್ದಾಗ ದೊಡ್ಡ ಗಾತ್ರದ ಸಿಮೆಂಟ್ ಬೋರ್ಡ್ ಏಕಾಏಕಿ ಕುಸಿದು ಬಿದ್ದಿದೆ. ಈ ವೇಳೆ ಮಕ್ಕಳು ಸೇರಿದಂತೆ ಹಲವರು ಅದರಡಿ ಸಿಲುಕಿದ್ದಾರೆ.
ಘಟನೆಯಲ್ಲಿ 1.5 ವರ್ಷದ ಸಮಾನ್ವಿತಾ ಹಾಗೂ 8 ವರ್ಷದ ವಿಶ್ವನಾಥ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ ಬಸಮ್ಮ, ಲಕ್ಷ್ಮಿ, ವಿಶಾಲಮ್ಮ (20) ಮತ್ತು ಇನ್ನೊಬ್ಬ ನಾಲ್ಕು ವರ್ಷದ ಮಗು ಸೇರಿದಂತೆ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು Raichur ನ OPD ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳೀಯರು ಈ ಘಟನೆಯನ್ನು ಕಳಪೆ ಕಾಮಗಾರಿ ಮತ್ತು ನಿರ್ಲಕ್ಷ್ಯದಿಂದ ಸಂಭವಿಸಿದ ದುರಂತ ಎಂದು ಆರೋಪಿಸಿದ್ದಾರೆ. “ಸರಿಯಾದ ಸುರಕ್ಷತಾ ಕ್ರಮಗಳಿಲ್ಲದೆ ನಿರ್ಮಿಸಿದ ನಾಮಫಲಕಗಳು ಅಪಾಯಕಾರಿಯಾಗಿವೆ” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸಂಬಂಧಪಟ್ಟ ಗುತ್ತಿಗೆದಾರರು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ತನಿಖೆ ನಡೆಯುತ್ತಿದೆ.

