ಶೇರು ಮಾರುಕಟ್ಟೆ ಹೂಡಿಕೆ ಹೆಸರಲ್ಲಿ ₹26.55 ಲಕ್ಷ ವಂಚನೆ

0
52

ಉಡುಪಿ: ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ₹26.55 ಲಕ್ಷ ಹಣ ಪಡೆದು ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ. ಈ ಸಂಬಂಧ ಜಯಂತ್ ಎಂಬವರು ಸೆನ್ (CEN) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರುದಾರ ಜಯಂತ್ ಅವರಿಗೆ ಎರಡು ವರ್ಷಗಳ ಹಿಂದೆ ಟೆಲಿಗ್ರಾಂ ಮೂಲಕ ‘ಕಾರ್ತಿಕ್’ ಎಂಬಾತನ ಪರಿಚಯವಾಗಿತ್ತು. ಕಳೆದ ಜನವರಿ 15ರಂದು ವಾಟ್ಸಪ್ ಮೂಲಕ ಜಯಂತ್‌ಗೆ ಕರೆ ಮಾಡಿದ್ದ ಈ ವ್ಯಕ್ತಿ, ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವಂತೆ ಆಮಿಷ ಒಡ್ಡಿದ್ದನು. ಜಯಂತ್ ಆತನನ್ನು ಪ್ರಶ್ನಿಸಿದಾಗ, ತನ್ನ ವಿಶ್ವಾಸಾರ್ಹತೆ ಮೆರೆಯಲು ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಪ್ರತಿ ಮತ್ತು ಭಾವಚಿತ್ರವನ್ನು ಕಳುಹಿಸಿಕೊಟ್ಟಿದ್ದನು. ಅದರಲ್ಲಿ ಮಂಗಳೂರಿನ ಕಸಬಾ ಬೆಂಗ್ರೆ ವಾಸಿ ಮಹಮ್ಮದ್ ಶಫೀಕ್ ಎಂಬ ಹೆಸರು ಇತ್ತು ಎನ್ನಲಾಗಿದೆ.ಆರೋಪಿಯ ಮಾತನ್ನು ನಂಬಿದ ಜಯಂತ್, ಆತ ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ₹26,55,000 ಹಣವನ್ನು ವರ್ಗಾವಣೆ ಮಾಡಿದ್ದಾರೆ. ಆದರೆ ಹಣ ಪಡೆದ ನಂತರ ಆರೋಪಿಯು ಲಾಭಾಂಶವನ್ನಾಗಲಿ ಅಥವಾ ಹೂಡಿಕೆ ಮಾಡಿದ ಅಸಲು ಹಣವನ್ನಾಗಲಿ ವಾಪಸ್ ನೀಡದೆ ವಂಚಿಸಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸೆನ್ ಪೊಲೀಸರು ಐಟಿ ಆಕ್ಟ್ ಮತ್ತು ಬಿಎನ್‌ಎಸ್ ಕಾಯ್ದೆಯಡಿ ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here