ಮಂಗಳೂರು: ಜಾಗತಿಕ ಕಡಲಾಹಾರ ರಫ್ತು ಕ್ಷೇತ್ರದಲ್ಲಿ ಭಾರತವು ಮತ್ತೊಂದು ಐತಿಹಾಸಿಕ ಸಾಧನೆ ದಾಖಲಿಸಿದೆ. 2025–26ನೇ ಹಣಕಾಸು ವರ್ಷದಲ್ಲಿ ದೇಶವು 73,890 ಕೋಟಿ ರೂಪಾಯಿ ಮೌಲ್ಯದ 19.72 ಲಕ್ಷ ಮೆಟ್ರಿಕ್ ಟನ್‌ಗೂ ಅಧಿಕ ಕಡಲಾಹಾರವನ್ನು ಸುಮಾರು 75 ರಾಷ್ಟ್ರಗಳಿಗೆ ರಫ್ತು ಮಾಡುವ ಮೂಲಕ ವಿಶ್ವದ ಪ್ರಮುಖ ಐದು ಕಡಲಾಹಾರ ರಫ್ತುದಾರ ರಾಷ್ಟ್ರಗಳ ಪೈಕಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ.
ಭಾರತದ ಕಡಲಾಹಾರ ರಫ್ತಿನಲ್ಲಿ ಶೀತಲೀಕೃತ ಸಿಗಡಿ (Frozen Shrimp) ಪ್ರಮುಖ ಪಾತ್ರವಹಿಸಿದ್ದು, ಒಟ್ಟು ರಫ್ತು ಆದಾಯದಲ್ಲಿ ಸುಮಾರು ಶೇ.66ರಷ್ಟು ಪಾಲು ಹೊಂದಿದೆ. ಇದರ ಜೊತೆಗೆ ಶೀತಲೀಕೃತ ಮೀನು, ಸ್ಕ್ವಿಡ್ ಹಾಗೂ ಕಟ್‌ಲ್‌ಫಿಶ್‌ಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಮುಂದುವರಿದಿದೆ.
ಭಾರತದಿಂದ ಅತಿ ಹೆಚ್ಚು ಕಡಲಾಹಾರವನ್ನು ಆಮದು ಮಾಡಿಕೊಳ್ಳುವ ರಾಷ್ಟ್ರವಾಗಿ ಅಮೆರಿಕ ಮೊದಲ ಸ್ಥಾನದಲ್ಲಿದ್ದು, ನಂತರ ಚೀನಾ, ಯುರೋಪಿಯನ್ ಒಕ್ಕೂಟ ಹಾಗೂ ಜಪಾನ್ ಪ್ರಮುಖ ಮಾರುಕಟ್ಟೆಗಳಾಗಿವೆ.
ಪ್ರಸ್ತುತ ಭಾರತದಲ್ಲಿ ವಾರ್ಷಿಕವಾಗಿ 1.97 ಕೋಟಿ ಟನ್‌ಗಿಂತ ಹೆಚ್ಚು ಮೀನು ಉತ್ಪಾದನೆಯಾಗುತ್ತಿದ್ದು, ಮೀನು ಸಾಕಾಣಿಕೆ ಮತ್ತು ಉತ್ಪಾದನೆಯಲ್ಲಿ ವಿಶ್ವದ ಎರಡನೇ ಅತಿದೊಡ್ಡ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ, ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸಿನ ಪ್ರಕಾರ ತಲಾ ವ್ಯಕ್ತಿಗೆ ವರ್ಷಕ್ಕೆ 23–24 ಕೆ.ಜಿ. ಮೀನು ಲಭ್ಯವಾಗಬೇಕಾದರೆ, ಭಾರತದಲ್ಲಿ ಈ ಪ್ರಮಾಣ ಕೇವಲ 12.5 ಕೆ.ಜಿಗೆ ಸೀಮಿತವಾಗಿದೆ. ಇದರಿಂದ ದೇಶೀಯ ಮಾರುಕಟ್ಟೆಯಲ್ಲಿ ಮೀನು ಉತ್ಪಾದನೆ ಮತ್ತು ಬಳಕೆಯನ್ನು ಹೆಚ್ಚಿಸಲು ಇನ್ನೂ ಸಾಕಷ್ಟು ಅವಕಾಶಗಳಿವೆ ಎಂಬುದು ತಜ್ಞರ ಅಭಿಪ್ರಾಯ.
ಇನ್ನೊಂದೆಡೆ, ಕರ್ನಾಟಕವು 343 ಕಿಲೋಮೀಟರ್ ಉದ್ದದ ಕರಾವಳಿ ತೀರ ಹಾಗೂ ಸಮೃದ್ಧ ಜಲಸಂಪನ್ಮೂಲಗಳನ್ನು ಹೊಂದಿದ್ದರೂ, ಅವುಗಳ ಸಂಪೂರ್ಣ ಸದ್ಬಳಕೆ ಇನ್ನೂ ಸಾಧ್ಯವಾಗಿಲ್ಲ. ಕೃಷಿ ಭೂಮಿಯ ಶೇ.1ರಿಂದ 5ರಷ್ಟು ಭಾಗ ಹಾಗೂ ಉಪ್ಪು-ಕ್ಷಾರಯುಕ್ತ ಭೂಮಿಗಳನ್ನು ವೈಜ್ಞಾನಿಕ ಮೀನು ಸಾಕಾಣಿಕೆಗೆ ಬಳಸಿಕೊಂಡರೆ ರೈತರಿಗೆ ಹೆಚ್ಚುವರಿ ಆದಾಯದ ಮೂಲ ಸೃಷ್ಟಿಯಾಗಲಿದೆ ಎಂದು ಮಂಗಳೂರು ಮೀನುಗಾರಿಕಾ ಕಾಲೇಜಿನ ಪ್ರಾಧ್ಯಾಪಕ ಡಾ. ಶಿವಕುಮಾರ್ ಮಗದ ಅಭಿಪ್ರಾಯಪಟ್ಟಿದ್ದಾರೆ.

