ಕೇರಳಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಅನ್ನಭಾಗ್ಯ ಅಕ್ಕಿ ಜಪ್ತಿ

0
10


ಉಡುಪಿ: ಸರ್ಕಾರದ ಉಚಿತ ‘ಅನ್ನಭಾಗ್ಯ’ ಯೋಜನೆಗೆ ಸೇರಿದ ಪಡಿತರ ಅಕ್ಕಿಯನ್ನು ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಕೇರಳಕ್ಕೆ ಸಾಗಿಸುತ್ತಿದ್ದ ಲಾರಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಕೋಟ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.
ಮಂಗಳವಾರ ಬೆಳಿಗ್ಗೆ ಸುಮಾರು 10 ಗಂಟೆಗೆ ದೊರೆತ ಖಚಿತ ಮಾಹಿತಿ ಮೇರೆಗೆ ಬ್ರಹ್ಮಾವರ ತಾಲೂಕು ಮಣೂರು ಗ್ರಾಮದಲ್ಲಿ ಬ್ರಹ್ಮಾವರ ಆಹಾರ ನಿರೀಕ್ಷಕ ವಸಂತ ಕುಮಾರ್, ಕೋಟ ಪೊಲೀಸ್ ಠಾಣೆಯ ಪಿ.ಎಸ್.ಐ. ಪ್ರವೀಣ್ ಕುಮಾರ್ ಹಾಗೂ ಸಿಬ್ಬಂದಿ ದಾಳಿ ನಡೆಸಿದರು.
320 ಚೀಲ ಅಕ್ಕಿ ವಶ
ತಪಾಸಣೆ ನಡೆಸಿದ ವೇಳೆ ಲಾರಿಯಲ್ಲಿ 320 ಪ್ಲಾಸ್ಟಿಕ್ ಬಿಳಿ ಚೀಲಗಳಲ್ಲಿ ತುಂಬಿದ್ದ ಅಂದಾಜು ರೂ. 3,84,000 ಮೌಲ್ಯದ ಒಟ್ಟು 160 ಕ್ವಿಂಟಾಲ್ ಉಚಿತ ಪಡಿತರ ಅಕ್ಕಿ ಪತ್ತೆಯಾಗಿದೆ. ಕುಮಟಾದ ನಾದಮಸ್ಕಿರಿಯಲ್ಲಿರುವ ಗಣೇಶ್ ರೈಸ್ ಇಂಡಸ್ಟ್ರೀಸ್ ಮಾಲಿಕ ನಾಗರಾಜ್ ನಾಯ್ಕ್ ಅವರು ಈ ಅಕ್ಕಿಯನ್ನು ಲಾರಿಗೆ ಲೋಡ್ ಮಾಡಿಸಿದ್ದು, ಅವರ ಸೂಚನೆಯಂತೆ ಚಾಲಕ ಕೆ. ನರಸಿಂಹ ಇದನ್ನು ಕೇರಳದ ಕಾಸರಗೋಡಿನಲ್ಲಿರುವ ಶಾಜಿ ಟ್ರೇಡಿಂಗ್ ಕಂಪೆನಿಗೆ ಅಕ್ರಮವಾಗಿ ಸಾಗಿಸುತ್ತಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ಕಾರ್ಯಾಚರಣೆಯಲ್ಲಿ 3.84 ಲಕ್ಷ ರೂ. ಮೌಲ್ಯದ ಅಕ್ಕಿ ಹಾಗೂ 3.50 ಲಕ್ಷ ರೂ. ಮೌಲ್ಯದ ಲಾರಿ ಸೇರಿ ಒಟ್ಟು 7,34,000 ರೂ. ಮೌಲ್ಯದ ಸ್ವತ್ತನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಆಹಾರ ನಿರೀಕ್ಷಕ ವಸಂತ ಕುಮಾರ್ ನೀಡಿರುವ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.