ಉಡುಪಿ : ಮಣಿಪಾಲ ಜಿಲ್ಲಾಧಿಕಾರಿ ಕಚೇರಿಯ ಹಿಂಭಾಗದಲ್ಲಿ ಶುಕ್ರವಾರ ಬೆಳಿಗ್ಗೆ ಮಾವಿನ ಮರಕ್ಕೆ ಏರಿ ಮಾವು ಕೊಯ್ಯುವಾಗ ವಿದ್ಯುತ್ ಸ್ಪರ್ಶಿಸಿ ಗ್ರಾಮ ಸಹಾಯಕರೊಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗ್ರಾಮ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸದಾನಂದ ಶೇರಿಗಾರ್ (54) ಎಂದು ಗುರುತಿಸಲಾಗಿದೆ.
ಬೆಳಿಗ್ಗೆ ಸುಮಾರು 09:15ಕ್ಕೆ ಸದಾನಂದ ಅವರು ಜಿಲ್ಲಾಧಿಕಾರಿಗಳ ಕಚೇರಿಯ ಹಿಂಭಾಗದ ಕಂಪೌಂಡ್‌ನಲ್ಲಿರುವ ಮಾವಿನ ಮರಕ್ಕೆ ಹತ್ತಿದ್ದರು. ಕಬ್ಬಿಣದ ಕೊಕ್ಕೆಯ ಸಹಾಯದಿಂದ ಮಾವಿನ ಹಣ್ಣುಗಳನ್ನು ಕೀಳಲು ಪ್ರಯತ್ನಿಸುತ್ತಿದ್ದಾಗ, ಆಕಸ್ಮಿಕವಾಗಿ ಕಬ್ಬಿಣದ ಕೊಕ್ಕೆ ಮರದ ಮೇಲ್ಭಾಗದಲ್ಲಿ ಹಾದುಹೋಗಿದ್ದ ಹೈ-ಟೆನ್ಷನ್ (HT) ವಿದ್ಯುತ್ ತಂತಿಗೆ ತಗುಲಿದೆ.
ಪರಿಣಾಮವಾಗಿ ತೀವ್ರ ವಿದ್ಯುತ್ ಆಘಾತ ಸಂಭವಿಸಿ,ಕೆಳಗೆ ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆಯು ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

