ಏ.26-30ರವರೆಗೆ ಮಿಯ್ಯಾರು ಕಾರೋಲ್‌ಗುಡ್ಡೆ ಶ್ರೀ ಮಹಾಗಣಪತಿ – ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಬ್ರಹ್ಮಕಲಶೋತ್ಸವ

0
21

ಕಾರ್ಕಳ : ಮಿಯ್ಯಾರು ಗ್ರಾಮದ ಕಾರೋಲ್‌ಗುಡ್ಡೆ ಜೋಡುಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಲಾದ ಶಿಲಾಮಯ ಗರ್ಭಗೃಹಗಳಲ್ಲಿ ಶ್ರೀ ಮಹಾಗಣಪತಿ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ದೇವರ ಪುನಃಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶಾಭಿಷೇಕ ಮಹೋತ್ಸವವು ಏಪ್ರಿಲ್ 26ರಿಂದ 30ರವರೆಗೆ ಭಕ್ತಿಭಾವದಿಂದ ಜರುಗಲಿದೆ.

ಬ್ರಹ್ಮಶ್ರೀ ಬೆಳ್ಳಣ್ಣು ದೊಡ್ಡಮನೆ ಸರ್ವೇಶ ತಂತ್ರಿಗಳ ಮಾರ್ಗದರ್ಶನದಲ್ಲಿ ಹಾಗೂ ವೇದಮೂರ್ತಿ ನಲ್ಲೂರು ಪರಪ್ಪಾಡಿ ರಾಮಕೃಷ್ಣ ಭಟ್ ಅವರ ಸಹಯೋಗದಲ್ಲಿ ಈ ಮಹೋತ್ಸವದ ಎಲ್ಲಾ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ಇದೇ ಸಂದರ್ಭದಲ್ಲಿ ಶ್ರೀ ಸುಬ್ರಹ್ಮಣ್ಯ ಮತ್ತು ಶ್ರೀ ನಾಗದೇವರ ಪುನಃಪ್ರತಿಷ್ಠಾಪನೆಯೂ ನೆರವೇರಲಿದೆ.

ಐದು ದಿನಗಳ ಈ ಉತ್ಸವಕ್ಕೆ ಏಪ್ರಿಲ್ 26ರಂದು ಸಂಜೆ ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಆರಂಭಗೊಳ್ಳುವ ಭವ್ಯ “ಹಸಿರುವಾಣಿ ಹೊರೆಕಾಣಿಕೆ” ಮೆರವಣಿಗೆ ಚಾಲನೆ ನೀಡಲಿದೆ. ಪ್ರತಿದಿನ ಗಣಪತಿ ಹೋಮ, ಶಿಖರ ಕಲಶ ಪ್ರತಿಷ್ಠೆ, ಅಷ್ಟಬಂಧ ಪ್ರತಿಷ್ಠೆ ಸೇರಿದಂತೆ ವಿವಿಧ ದೇವರ ಬಿಂಬ ಪ್ರತಿಷ್ಠಾಪನೆಗಳಂತಹ ವಿಶೇಷ ಪೂಜೆಗಳು ಜರುಗಲಿವೆ.

ಉತ್ಸವದ ಸಮಾರೋಪ ದಿನವಾದ ಏಪ್ರಿಲ್ 30ರಂದು ಶ್ರೀ ನಾಗದೇವರು, ಶ್ರೀ ಸುಬ್ರಹ್ಮಣ್ಯ, ಶ್ರೀ ಮಹಾಗಣಪತಿ ಮತ್ತು ಶ್ರೀ ಅಯ್ಯಪ್ಪ ಸ್ವಾಮಿ ದೇವರಿಗೆ ಮಧ್ಯಾಹ್ನ ಹಾಗೂ ರಾತ್ರಿ ಶುಭ ಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ ನಡೆಯಲಿದೆ.

ಧಾರ್ಮಿಕ ಸಭೆಗಳು

ಈ ಸಂದರ್ಭದಲ್ಲಿ ನಡೆಯುವ ಧಾರ್ಮಿಕ ಸಭೆಗಳಲ್ಲಿ ನಾಡಿನ ಗಣ್ಯರು ಭಾಗವಹಿಸಲಿದ್ದಾರೆ. ಕೇಮಾರು ಸಾಂದೀಪನಿ ಸಾಧನಾ ಆಶ್ರಮದ ಶ್ರೀ ಶ್ರೀ ಶ್ರೀ ಸತ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶಾಸಕ ವಿ. ಸುನಿಲ್ ಕುಮಾರ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉದ್ಯಮಿ ಉದಯಕುಮಾರ್ ಶೆಟ್ಟಿ ಮುನಿಯಾಲು, ಡಾ. ರವೀಂದ್ರ ಶೆಟ್ಟಿ ಬಜಗೋಳಿ ಹಾಗೂ ಎ. ಜೀವಂಧರ್ ಕುಮಾರ್ ಕೊಡಮಣಿತ್ತಾಯ ಸೇರಿದಂತೆ ಹಲವರು ವಿವಿಧ ದಿನಗಳಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್, ಉದ್ಯಮಿ ಶಶಿಧರ ಶೆಟ್ಟಿ ಬರೋಡಾ, ನ್ಯಾಯವಾದಿ ಮಣಿರಾಜ ಶೆಟ್ಟಿ, ಶ್ರೀಪತಿ ಭಟ್ ಮೂಡಬಿದ್ರೆ, ಇಸ್ರೋ ನಿವೃತ್ತ ವಿಜ್ಞಾನಿ ಜನಾರ್ಧನ ರಾವ್ ಇಡ್ಯಾ ಮತ್ತು ಲೋಹಿತಾಶ್ವ ಕೇದಿಗ್ಗೆರೆ ಮೊದಲಾದ ಗಣ್ಯರು ಗೌರವ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.

ಐದು ದಿನಗಳ ಕಾಲ ಮಧ್ಯಾಹ್ನ ಹಾಗೂ ರಾತ್ರಿ ಭಕ್ತರಿಗೆ ಮಹಾ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿದೆ.

ಸಾಂಸ್ಕೃತಿಕ ವೈಭವ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಬಜಪೆಯ ಥಂಡರ್‌ಗೈಸ್ ಫೌಂಡೇಶನ್‌ನಿಂದ “ಕ್ಷೇತ್ರ ಪುರಾಣ ಮಂಜರಿ” ನೃತ್ಯ ಸಂಗಮ, ಕಾಸರಗೋಡಿನ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆಯಿಂದ “ಸಾಂಸ್ಕೃತಿಕ ವೈಭವ”, ಉಮೇಶ್ ಮಿಜಾರ್ ಬಳಗದಿಂದ “ತೆಲಿಕೆದ ಗೊಂಚೆಲ್” ಹಾಸ್ಯ ಕಾರ್ಯಕ್ರಮ ಹಾಗೂ ರಮ್ಯ ಸುಧೀಂದ್ರ ಅವರ ಸಾರಥ್ಯದಲ್ಲಿ “ಭಕ್ತಿ-ಸುಗಮ ಸಂಗೀತ ರಸಮಂಜರಿ” ಕಾರ್ಯಕ್ರಮಗಳು ಜರುಗಲಿವೆ.

ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ವಿ. ಎಮ್. ಚಿನ್ನಸ್ವಾಮಿ, ಅಧ್ಯಕ್ಷ ಸಿ. ತಂಗರಾಜ್ ಹಾಗೂ ಟ್ರಸ್ಟ್ ಅಧ್ಯಕ್ಷ ಕೆ. ಎಸ್. ವಿಶ್ವನಾಥ್ ಅವರ ನೇತೃತ್ವದಲ್ಲಿ ಈ ಮಹೋತ್ಸವವನ್ನು ಯಶಸ್ವಿಯಾಗಿ ಆಯೋಜಿಸಲಾಗುತ್ತಿದೆ.

LEAVE A REPLY

Please enter your comment!
Please enter your name here