ಬೆಂಗಳೂರು : ಎಪಿಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ವಿಷ್ಣು ಭರತ್ ಅಲ್ಲಂಪಲ್ಲಿ ಅವರಿಗೆ “ಎಜುಕೇಶನ್ ಐಕಾನ್ ಆಫ್ ದಿ ಇಯರ್-2026” ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವಾಲಯ, ಸ್ಕಿಲ್ ಇಂಡಿಯಾ, ಎನ್.ಸಿ.ವಿ.ಇ,ಟಿ ಹಾಗೂ ಎನ್.ಎಸ್.ಡಿ.ಸಿ ಮತ್ತು 91 ಪ್ಲಸ್ ಮೀಡಿಯಾದಿಂದ ನಗರದ ಚಾನ್ಲಲರಿ ಪೆವಿಲಿಯನ್ ನಲ್ಲಿ 28 ನೇ ಎಜುಲೀಡರ್ಸ್ ಶೃಂಗ ಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ವಿಷ್ಣು ಭರತ್ ಅಲಂ ಪಲ್ಲಿ, ಶಿಕ್ಷಣ ಮನುಷ್ಯನ ಜೀವನದ ಅತ್ಯಂತ ಶಕ್ತಿಯುತ ಮತ್ತು ಶಾಶ್ವತ ಆಸ್ತಿ. ಜ್ಞಾನವನ್ನು ಹಂಚಿದಷ್ಟೂ ಅದು ಬೆಳೆಯುತ್ತದೆ. ಶಿಕ್ಷಣ ಕೇವಲ ಬುದ್ಧಿವಂತಿಕೆಯನ್ನು ಮಾತ್ರವಲ್ಲದೆ, ನಮ್ಮ ನಡತೆ ಮತ್ತು ಮೌಲ್ಯಗಳನ್ನು ರೂಪಿಸುತ್ತದೆ. ಸಾಮಾನ್ಯವಾಗಿ ಯಶಸ್ಸು ಎಂದರೆ ಸಂಪತ್ತು ಅಥವಾ ಅಂತಸ್ತು ಎಂದು ನಾವು ಭಾವಿಸುತ್ತೇವೆ. ಆದರೆ ನಿಜವಾದ ಯಶಸ್ಸು ಇರುವುದು ನಮ್ಮ ಜೀವನದ ತೃಪ್ತಿಯಲ್ಲಿ ಮತ್ತು ಸಮಾಜಕ್ಕೆ ನಾವು ನೀಡುವ ಕೊಡುಗೆಯಲ್ಲಿ ಎಂದರು.
ಕಲಿಕೆ ಜೀವನಪರ್ಯಂತ ನಡೆಯುವ ಪ್ರಕ್ರಿಯೆ. ಶಾಲಾ ಶಿಕ್ಷಣ ನಮಗೆ ಅಡಿಪಾಯ ಹಾಕಿಕೊಟ್ಟರೆ, ಅನುಭವಗಳು ನಮಗೆ ಜೀವನದ ಪಾಠಗಳನ್ನು ಕಲಿಸುತ್ತವೆ. ಶಿಕ್ಷಣ ಬಡತನವನ್ನು ಹೋಗಲಾಡಿಸಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಇದು ನಾವು ಬೆಳೆಯುವ ಜೊತೆಗೆ ಇತರರನ್ನು ಬೆಳೆಸುವ ಶಕ್ತಿಯನ್ನು ನೀಡುತ್ತದೆ. ಇಂದಿನ ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನ ಎಲ್ಲರಿಗೂ ಶಿಕ್ಷಣ ತಲುಪುವಂತೆ ಮಾಡಿದೆ. ಆದರೆ ತಂತ್ರಜ್ಞಾನದ ಜೊತೆಗೆ ಮಾನವೀಯ ಸಂಬಂಧಗಳು ಮತ್ತು ಸಂಸ್ಕಾರಗಳೂ ಅಷ್ಟೇ ಮುಖ್ಯ. ಶಿಕ್ಷಕರು ಮತ್ತು ವಿದ್ಯಾಸಂಸ್ಥೆಗಳು ಕೇವಲ ಪಾಠವನ್ನಷ್ಟೇ ಅಲ್ಲದೆ, ಮುಂದಿನ ಭವಿಷ್ಯವನ್ನೇ ರೂಪಿಸುತ್ತಾರೆ. ವಿನಯ ಮತ್ತು ಜವಾಬ್ದಾರಿಯಿಂದ ಕೂಡಿದ ಶಿಕ್ಷಣವು ಸಮಾಜಕ್ಕೆ ಒಳ್ಳೆಯದನ್ನೇ ಮಾಡುತ್ತದೆ ಎಂದರು.

