ಕುಂದಲಹಳ್ಳಿ ಗೇಟ್ ಸಮೀಪದ ಎಇಸಿಎಸ್ ಬಡಾವಣೆಯಲ್ಲಿ ಡಾಂಬರು ಹಾಕಿದ ಎರಡೇ ದಿನದಲ್ಲಿ ರಸ್ತೆಗೆ ಹಾನಿ ಮಾಡಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಿ: ಎಸ್. ಸಂಗಮೇಶ್ ಒತ್ತಾಯ

0
18

ಬೆಂಗಳೂರು : ಕುಂದಲಹಳ್ಳಿಯ ಎಇಸಿಎಸ್ ಬಡಾವಣೆಯಲ್ಲಿ 60 ಅಡಿ ರಸ್ತೆಗೆ ಡಾಂಬರು ಹಾಕಿದ ಕೇವಲ ಎರಡು ದಿನಗಳಲ್ಲಿ ಹಾನಿ ಮಾಡಿದ್ದು, ಅಧಿಕಾರ ದುರ್ಬಳಕೆ ಮಾಡಿಕೊಂಡ ಜಿಬಿಎ ಇಂಜಿನಿಯರ್ ಗಳನ್ನು ಅಮಾನತುಗೊಳಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ಯುವ ಸಮೂಹದ ರಾಜ್ಯಾಧ್ಯಕ್ಷ ಎಸ್. ಸಂಗಮೇಶ್ ಒತ್ತಾಯಿಸಿದ್ದಾರೆ.

ಕುಂದಲಹಳ್ಳಿ ಗೇಟ್ ಸಮೀಪದ ಎಇಸಿಎಸ್ ಬಡಾವಣೆಯ 60 ಅಡಿ ರಸ್ತೆಯಲ್ಲಿ ಡಾಂಬರು ಹಾಕುವ ಕಾಮಗಾರಿಯನ್ನು ಇದೇ ತಿಂಗಳ 17 ಮತ್ತು 18 ರಂದು ಪೂರ್ಣಗೊಂಡಿತ್ತು. ಆದರೆ ಏ. 19 ರಂದು ಅದೇ ರಸ್ತೆಯನ್ನು ತೋಡಿ ಸಾರ್ಜನಿಕ ಆಸ್ತಿಗೆ ಧಕ್ಕೆ ಉಂಟು ಮಾಡಕಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹದೇವಪುರ ವಲಯದ ಜಿಬಿಎ ಅಧಿಕಾರಿಗಳಾದ ರವಿ ಕುಮಾರ್ (ಇಇ), ಶ್ರೀಕಾಂತ್ (ಎಇಇ) ಹಾಗೂ ಸಂತೋಷ್ (ಎಇ) ಅವರ ವಿರುದ್ಧ ಗಂಭೀರ ಆರೋಪಗಳು ಕೇಳಿಬರುತ್ತಿದ್ದು, ಇದು ಕೇವಲ ನಿರ್ಲಕ್ಷ್ಯವಲ್ಲ. ಅಧಿಕಾರ ದುರುಪಯೋಗವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊಸದಾಗಿ ನಿರ್ಮಿಸಿದ ರಸ್ತೆಯನ್ನು ಕೇವಲ ಎರಡು ದಿನಗಳಲ್ಲಿ ತೋಡಿದ್ದು, ಇದಕ್ಕೆ ಹೊಣೆಗಾರರಾದ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಬೇಕು. ಹೊಸದಾಗಿ ಅಸ್ಫಾಲ್ಟ್ ಹಾಕಿದ ರಸ್ತೆಯನ್ನು ತೋಡಲು ಶ್ರೀಕಾಂತ್ ಅವರು ಬಿಲ್ಡರ್‌ಗೆ ಅನುಮತಿ ನೀಡಿದ್ದಾರೆ. ಇದು ಸಂಪೂರ್ಣ ಜವಾಬ್ದಾರಿಯಿಲ್ಲದ ನಡಾವಳಿಕೆಯಾಗಿದೆ. ಘಟನೆ ಬಹಿರಂಗವಾದ ನಂತರ ಅದನ್ನು ಮುಚ್ಚಿಹಾಕಲು ಪ್ರಯತ್ನ ನಡೆದಿರುವುದೂ ಗಂಭೀರ ಅನುಮಾನಗಳಿಗೆ ಕಾರಣವಾಗಿದೆ ಎಂದಿದ್ದಾರೆ.

ಮಾರ್ಷಲ್ ಸಿಬ್ಬಂದಿ ಕಾರ್ಮಿಕರ ಬಳಿಯಿದ್ದ ಸಾಮಗ್ರಿಗಳನ್ನು ವಶಪಡಿಸಿಕೊಂಡ ಸಂದರ್ಭದಲ್ಲಿ, ಅದನ್ನು ಹಿಂತಿರುಗಿಸಿ ಕೆಲಸ ಮುಂದುವರಿಸಲು ಸೂಚನೆ ನೀಡಿದರೆಂಬ ಆರೋಪವೂ ಕೇಳಿಬಂದಿದೆ. ಈ ವಿಷಯ ತಿಳಿದ ತಕ್ಷಣ ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಆಗಮಿಸಿ ಕೆಲಸ ನಿಲ್ಲಿಸಿದ್ದಾರೆ. ಬಳಿಕ ರಸ್ತೆ ಅಗೆಯಲು “ಅನುಮತಿ ನೀಡಿಲ್ಲ” ಎಂದು ಹೇಳುವ ಮೂಲಕ ಹೊಣೆಗಾರಿಕೆಯಿಂದ ತಪ್ಪಿಸಲು ಪ್ರಯತ್ನಿಸಿದ್ದಾರೆ. ತಪ್ಪಿತಸ್ಥರನ್ನು ರಕ್ಷಿಸುವ ಯಾವುದೇ ಪ್ರಯತ್ನವನ್ನೂ ನಾವು ಸಹಿಸುವುದಿಲ್ಲ,” ಎಂದು ಎಸ್. ಸಂಗಮೇಶ್ ಎಚ್ಚರಿಸಿದ್ದಾರೆ.

ಮುಖ್ಯ ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳಲ್ಲಿ ಅಕ್ರಮ ಅತಿಕ್ರಮಣದ ವಿರುದ್ಧ ಕ್ರಮ ಕೈಗೊಂಡಿಲ್ಲ. ನಿರಂತರ ದೂರುಗಳಿದ್ದರೂ ನಿರ್ಲಕ್ಷ್ಯ ತೋರಲಾಗಿದೆ. ಇದರಿಂದ ಹಿರಿಯ ನಾಗರಿಕರಿಗೆ ಸಂಚಾರದಲ್ಲಿ ತೀವ್ರ ತೊಂದರೆ ಉಂಟಾಗಿದ್ದು, ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ಸಂಚಾರಕ್ಕೂ ಅಡಚಣೆ ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ.
ಸ್ಥಳೀಯ ಆಟದ ಮೈದಾನವನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಲು ಅನುಮತಿ ನೀಡಿ ಹಣ ವಸೂಲಿ ಮಾಡಲಾಗುತ್ತಿದೆ.

ಇದರಿಂದ ಮಕ್ಕಳಿಗೆ ಹಾಗೂ ಹಿರಿಯರಿಗೆ ಅಗತ್ಯವಾದ ಸಾರ್ವಜನಿಕ ಸ್ಥಳಗಳ ಕೊರತೆ ಉಂಟಾಗಿದೆ. ಸಾರ್ವಜನಿಕ ಹಣದಲ್ಲಿ ನಿರ್ಮಿಸಲಾದ ಮೂಲಸೌಕರ್ಯವನ್ನು ಹಾನಿಗೊಳಪಡಿಸುವ ಯಾವುದೇ ಅಧಿಕಾರಿಗಳನ್ನೂ ಕ್ಷಮಿಸಬಾರದು. ಕ್ರಮ ಕೈಗೊಳ್ಳದಿದ್ದರೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿವಾಸದ ಮುಂದೆ ಪ್ರತಿ ಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here