ಪತ್ನಿಯನ್ನೇ ಕೊಲೆ ಮಾಡಿ ನಾಪತ್ತೆ ನಾಟಕವಾಡಿದ ಪತಿ – ಪತ್ರದಿಂದ ಬಯಲಾಯ್ತು ಭೀಕರ ಸತ್ಯ

0
49

ಸೂರತ್ : ಪತ್ನಿಯನ್ನು ಹತ್ಯೆ ಮಾಡಿ ನಂತರ ನಾಪತ್ತೆಯ ನಾಟಕವಾಡಿದ ಪತಿಯ ಕೃತ್ಯ ಬೆಳಕಿಗೆ ಬಂದಿರುವ ಘಟನೆ ಸೂರತ್‌ನಲ್ಲಿ ನಡೆದಿದೆ. ಆರೋಪಿ ವಿಶಾಲ್ ಸಾಳ್ವಿ (40) ತನ್ನ ಪತ್ನಿ ಶಿಲ್ಪಾ ಸಾಳ್ವಿ (39) ನಾಲ್ಕು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದನು.

ವೃತ್ತಿಯಲ್ಲಿ ಡಯಟೀಶಿಯನ್ ಆಗಿದ್ದ ಶಿಲ್ಪಾ ಕುರಿತು ಆರಂಭದಲ್ಲಿ ಪೊಲೀಸರು ಸಾಮಾನ್ಯ ನಾಪತ್ತೆ ಪ್ರಕರಣವೆಂದು ತನಿಖೆ ಆರಂಭಿಸಿದ್ದರು. ಆದರೆ ಪ್ರಕರಣಕ್ಕೆ ತಿರುವು ತಂದದ್ದು ಆರೋಪಿಯ ಅಪ್ರಾಪ್ತ ವಯಸ್ಸಿನ ಮಗನಿಂದ ಸಿಕ್ಕ ಪತ್ರ. ವಿಶಾಲ್ ಬರೆದಿದ್ದ ಆ ಪತ್ರದಲ್ಲಿ “ನಾನು ದೊಡ್ಡ ತಪ್ಪು ಮಾಡಿದ್ದೇನೆ, ಶಿಲ್ಪಾ ಇನ್ನು ಜೀವಂತವಾಗಿಲ್ಲ” ಎಂದು ಉಲ್ಲೇಖಿಸಲಾಗಿತ್ತು. ಇದರಿಂದ ಅನುಮಾನಗೊಂಡ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದರು.

ಸಲಾಬತ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಆರೋಪಿಗೆ ಸೇರಿದ ಹಳೆಯ ಮನೆಯನ್ನು ಪರಿಶೀಲಿಸಿದ ವೇಳೆ, ಒಂದು ಮರದ ಪೆಟ್ಟಿಗೆಯಿಂದ ದುರ್ವಾಸನೆ ಬರುತ್ತಿರುವುದು ಗಮನಕ್ಕೆ ಬಂತು. ಪೆಟ್ಟಿಗೆಯನ್ನು ತೆರೆಯುತ್ತಿದ್ದಂತೆ ಸಿಮೆಂಟ್‌ನಿಂದ ಮುಚ್ಚಲ್ಪಟ್ಟ ಸ್ಥಿತಿಯಲ್ಲಿ ಶಿಲ್ಪಾ ಅವರ ಮೃತದೇಹ ಪತ್ತೆಯಾಯಿತು.

ಪ್ರಾಥಮಿಕ ತನಿಖೆಯ ಪ್ರಕಾರ, ಪತ್ನಿಯ ಮೇಲಿದ್ದ ಅನುಮಾನವೇ ಈ ಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಷಯವಾಗಿ ದಂಪತಿಗಳ ನಡುವೆ ಪದೇ ಪದೇ ಜಗಳವಾಗುತ್ತಿತ್ತು ಎನ್ನಲಾಗಿದೆ.

ಕೊಲೆ ನಡೆದ ನಾಲ್ಕು ದಿನಗಳ ನಂತರ ಪೊಲೀಸರನ್ನು ತಪ್ಪುದಾರಿಗೆಳೆದುಕೊಳ್ಳಲು ವಿಶಾಲ್ ನಾಪತ್ತೆ ನಾಟಕವಾಡಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿ ಮತ್ತು ಇತರ ಪುರಾವೆಗಳ ಆಧಾರದ ಮೇಲೆ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

LEAVE A REPLY

Please enter your comment!
Please enter your name here