ಬೇವು (Neem) ಒಂದು ಶಕ್ತಿಶಾಲಿ ಔಷಧೀಯ ಗಿಡಮೂಲಿಕೆಯಾಗಿದ್ದು, ಕಹಿ ರುಚಿ ಇದ್ದರೂ ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಉಪಕಾರಿಯಾಗುತ್ತದೆ. ವಿಶೇಷವಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೇವಿನ ಜ್ಯೂಸ್ ಸೇವಿಸುವುದರಿಂದ ದೇಹದ ಒಳಾಂಗಣ ಶುದ್ಧೀಕರಣಕ್ಕೆ ಸಹಾಯವಾಗುತ್ತದೆ ಎಂದು ಹಲವರು ನಂಬುತ್ತಾರೆ. ಆದರೆ ಎಲ್ಲರಿಗೂ ಇದು ಸಮಾನವಾಗಿ ಉಪಯುಕ್ತವಲ್ಲ ಎಂದು ಪೌಷ್ಟಿಕ ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ.
ಬೇವಿನ ಜ್ಯೂಸ್ನ ಪ್ರಮುಖ ಪ್ರಯೋಜನಗಳು
ಬೇವಿನ ರಸವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಕಾರಿ. ವಿಶೇಷವಾಗಿ ಟೈಪ್-2 ಮಧುಮೇಹ ಹೊಂದಿರುವವರಿಗೆ ಇದು ಸಹಜ ಚಿಕಿತ್ಸೆಯಂತೆ ಕೆಲಸ ಮಾಡಬಹುದು. ಜೊತೆಗೆ ದೇಹದಲ್ಲಿನ ವಿಷಾಂಶಗಳನ್ನು ಹೊರಹಾಕಿ ರಕ್ತವನ್ನು ಶುದ್ಧೀಕರಿಸುವ ಮೂಲಕ ಯಕೃತ್ತಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
ಚರ್ಮದ ಆರೋಗ್ಯಕ್ಕೂ ಇದು ಒಳ್ಳೆಯದು. ಮೊಡವೆ, ಕಲೆಗಳು, ತುರಿಕೆ ಮುಂತಾದ ಸಮಸ್ಯೆಗಳನ್ನು ಕಡಿಮೆ ಮಾಡಿ ತ್ವಚೆಗೆ ನೈಸರ್ಗಿಕ ಹೊಳಪು ನೀಡುತ್ತದೆ. ಹಾಗೆಯೇ ಬಾಯಿಯ ದುರ್ವಾಸನೆ ನಿವಾರಣೆ ಮತ್ತು ಹಲ್ಲು-ಒಸಡುಗಳ ಬಲವರ್ಧನೆಗೂ ಸಹಕಾರಿ.
ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು?
ಪೌಷ್ಟಿಕ ತಜ್ಞರ ಪ್ರಕಾರ ಬೇವಿನ ಜ್ಯೂಸ್ ಅನ್ನು ಸಾಮಾನ್ಯ ಪಾನೀಯದಂತೆ ಹೆಚ್ಚು ಪ್ರಮಾಣದಲ್ಲಿ ಸೇವಿಸಬಾರದು.
ದಿನಕ್ಕೆ 5ರಿಂದ 10 ಮಿಲಿ ಮಾತ್ರ ತೆಗೆದುಕೊಳ್ಳುವುದು ಸೂಕ್ತ
ಬೆಳಗ್ಗೆ ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯಬಹುದು
ನಿರಂತರವಾಗಿ ತಿಂಗಳುಗಳ ಕಾಲ ಸೇವಿಸುವುದಕ್ಕಿಂತ, ಒಂದು ವಾರ ಸೇವಿಸಿ ವಿರಾಮ ನೀಡುವುದು ಉತ್ತಮ
ಯಾರಿಗೆ ಬೇವಿನ ಜ್ಯೂಸ್ ಅಪಾಯಕಾರಿಯಾಗಿದೆ?
ಕೆಲವರಿಗೆ ಬೇವಿನ ರಸ ಲಾಭಕ್ಕಿಂತ ಹಾನಿ ಉಂಟುಮಾಡಬಹುದು:
ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು: ಗರ್ಭಪಾತದ ಅಪಾಯ ಹೆಚ್ಚಾಗಬಹುದು
ಮಕ್ಕಳು: ಯಕೃತ್ತಿನ ಹಾಗೂ ಮೂತ್ರಪಿಂಡದ ಸಮಸ್ಯೆಗಳ ಸಾಧ್ಯತೆ
ಶಸ್ತ್ರಚಿಕಿತ್ಸೆಗೆ ಸಿದ್ಧರಾಗಿರುವವರು: ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಅಚಾನಕ್ ಬದಲಾವಣೆ ಉಂಟಾಗಬಹುದು
ಕಿಡ್ನಿ ಅಥವಾ ಯಕೃತ್ತಿನ ಕಾಯಿಲೆ ಹೊಂದಿರುವವರು: ವೈದ್ಯರ ಸಲಹೆಯಿಲ್ಲದೇ ಸೇವನೆ ಅಪಾಯಕಾರಿ

