ಕಿನ್ನಿಗೋಳಿ: ರಾತ್ರಿ ವೇಳೆ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದ ರಸ್ತೆ ಹಂಪ್ಸ್ ಗಳಿಗೆ ಬಣ್ಣ ಬಳಿಯುವ ಮೂಲಕ ‘ಮೀಡಿಯಾ ಮನಸುಗಳು’ ತಂಡವು ಅಪಘಾತ ತಡೆಯುವ ಮಹತ್ವದ ಕಾರ್ಯ ಕೈಗೊಂಡಿದೆ.
ಇಲ್ಲಿನ ಸೈಂಟ್ ಮೇರಿ ಶಿಕ್ಷಣ ಸಂಸ್ಥೆಗಳು, ಕಾನ್ಸೆಟ್ಟ ಆಸ್ಪತ್ರೆ ಹಾಗೂ ಚರ್ಚ್ ಮುಂಭಾಗದ ರಾಜ್ಯ ಹೆದ್ದಾರಿಯಲ್ಲಿ ನಿರ್ಮಿಸಲಾಗಿದ್ದ ರೋಡ್ ಹಂಪ್ಸ್‌ಗಳ ಬಣ್ಣ ಮಾಸಿಹೋಗಿತ್ತು. ಇದರಿಂದಾಗಿ ತಡರಾತ್ರಿ ಸಂಚರಿಸುವ ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನ ಸವಾರರಿಗೆ ರಸ್ತೆ ಹಂಪ್ಸ್ ಗಳು ಗೋಚರಿಸದೆ ಅಪಾಯ ಸೃಷ್ಟಿಯಾಗುತ್ತಿತ್ತು.
ಸಮಸ್ಯೆಯ ಗಂಭೀರತೆಯನ್ನು ಅರಿತ ‘ಮೀಡಿಯಾ ಮನಸುಗಳು’ ತಂಡದ ಸದಸ್ಯರು ತಡರಾತ್ರಿ ಸ್ಥಳಕ್ಕೆ ಆಗಮಿಸಿ, ಹಂಪ್ಸ್‌ಗಳಿಗೆ ಬಿಳಿ ಬಣ್ಣ ಬಳಿಯುವ ಕಾರ್ಯಾಚರಣೆ ನಡೆಸಿದರು. ತಂಡದ ಈ ತುರ್ತು ಸ್ಪಂದನೆಯಿಂದಾಗಿ ಸವಾರರಿಗೆ ಎದುರಾಗಿದ್ದ ದೊಡ್ಡ ಕಂಟಕವೊಂದು ದೂರವಾದಂತಾಗಿದೆ.
ಈ ಶ್ರಮದಾನದಲ್ಲಿ ‘ಮೀಡಿಯಾ ಮನಸುಗಳು’ ತಂಡದ ಮುಖಂಡರಾದ ಶಶಿ ಬೆಳ್ಳಾಯರು, ಸಂದೇಶ್ ಶೆಟ್ಟಿ, ಶಿವು ಕುಲಾಲ್, ಮೋಹನ್ ಕುತ್ತಾರ್, ಗಿರೀಶ್ ಮಣೇಲ್ ಮತ್ತು ಹೆಚ್.ಟಿ. ಶಿವು ಕುಮಾರ್ ಭಾಗವಹಿಸಿ ಸಮಾಜಮುಖಿ ಕಾರ್ಯಕ್ಕೆ ಸಾಕ್ಷಿಯಾದರು.
ಸಾರ್ವಜನಿಕ ಹಿತದೃಷ್ಟಿಯಿಂದ ಸ್ವಯಂಪ್ರೇರಿತರಾಗಿ ಶ್ರಮಿಸಿದ ಯುವಕರ ಈ ಕಾರ್ಯಕ್ಕೆ ಕಾರ್ನಾಡ್ ರಚನಾ ಎಂಟರ್ ಪ್ರೈಸಸ್ ಮಾಲಕರು ನೆರವು ನೀಡಿದ್ದಾರೆ. ವಾಹನ ಸವಾರರು ಹಾಗೂ ಸ್ಥಳೀಯರು ಧನ್ಯವಾದ ಅರ್ಪಿಸಿದ್ದಾರೆ.
Home Uncategorized ಅಪಘಾತ ತಡೆಗೆ ಯುವಕರ ವಿಶಿಷ್ಟ ಹೆಜ್ಜೆ: ಕಿನ್ನಿಗೋಳಿಯಲ್ಲಿ ರೋಡ್ ಹಂಪ್ಸ್‌ಗೆ ಪೈಂಟ್ ಬಳಿದ ‘ಮೀಡಿಯಾ ಮನಸುಗಳು’

