ಸುಳ್ಯ, ಮೇ 06: ಜನತಾದಳ ಜಾತ್ಯತೀತ (ಜೆಡಿಎಸ್) ಪಕ್ಷದ ದಕ್ಷಣ ಕನ್ನಡ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಯೋಗಿಶ್ ಶೆಟ್ಟಿ ಜಪ್ಪು ಅವರು ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸುಳ್ಯಕ್ಕೆ ಭೇಟಿ ನೀಡಿ, ಅಲ್ಲಿನ ಜೆಡಿಎಸ್ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ಆತ್ಮೀಯ ಸಂವಾದ ನಡೆಸಿದರು.

ಸುಳ್ಯ ನಗರಕ್ಕೆ ಆಗಮಿಸಿದ ವೇಳೆ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರು ಅವರನ್ನು ಉತ್ಸಾಹಭರಿತವಾಗಿ ಸ್ವಾಗತಿಸಿದರು. ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸುವ ಅಗತ್ಯವನ್ನು ಒತ್ತಿಹೇಳಿದರು.

ಮುಂದಿನ ದಿನದಲ್ಲಿ ಜಿಲ್ಲಾದ್ಯಕ್ಷರಾದ ಜಾಕೆ ಮಾಧವ ಗೌಡರ ನೇತ್ರತ್ವದಲ್ಲಿ ಪಕ್ಷದ ಸಂಘಟನೆ ಬಲವರ್ಧನೆಗೆ ಒತ್ತು ನೀಡುವ ನಿಟ್ಟಿನಲ್ಲಿ “ನಮ್ಮ ನಡಿಗೆ ಕಾರ್ಯಕರ್ತರೆಡೆಗೆ” ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈ ಕಾರ್ಯಕ್ರಮದ ಮೂಲಕ ಸ್ಥಳೀಯ ಮಟ್ಟದ ಕಾರ್ಯಕರ್ತರೊಂದಿಗೆ ನೇರವಾಗಿ ಭೇಟಿ ಮಾಡಿ ಅವರ ಅಭಿಪ್ರಾಯಗಳು, ಸಮಸ್ಯೆಗಳು ಹಾಗೂ ಸಲಹೆಗಳನ್ನು ಆಲಿಸಲಾಗುತ್ತದೆ. ಕಾರ್ಯಕರ್ತರೇ ಪಕ್ಷದ ಆಧಾರಸ್ತಂಭರಾಗಿದ್ದು, ಅವರ ಜೊತೆ ನಿರಂತರ ಸಂಪರ್ಕ ಬೆಳೆಸುವುದು ಮುಖ್ಯ ಉದ್ದೇಶವಾಗಿದೆ. ಆ ಮೂಲಕ ಹಳೆಯ ಕಾರ್ಯಕರ್ತರು ಮತ್ತು ಹೊಸ ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವ ಕಾರ್ಯಕ್ರಮಕ್ಕೆ ಚಾಲನೆ ನಡೆಯಲಿದೆ ಎಂದರು.

“ಪಕ್ಷದ ಶಕ್ತಿ ಕಾರ್ಯಕರ್ತರಲ್ಲಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಸ್ವಾರ್ಥ ಸೇವೆಯಿಂದಲೇ ಜೆಡಿಎಸ್ ಮತ್ತಷ್ಟು ಬಲಿಷ್ಠವಾಗುತ್ತದೆ,” ಎಂದು ಅವರು ತಿಳಿಸಿದರು. ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದತ್ತ ಸೆಳೆಯುವತ್ತ ವಿಶೇಷ ಗಮನ ಹರಿಸಬೇಕೆಂದೂ ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಿದ್ಯಾರ್ಥಿ ಜನತಾದಳದ ಜಿಲ್ಲಾಧ್ಯಕ್ಷ ನಿಹಾಲ್ ಕೋಡ್ತುಗುಳಿ ಅವರು ಹೂಗುಚ್ಛ ನೀಡಿ ಯೋಗಿಶ್ ಶೆಟ್ಟಿ ಜಪ್ಪು ಅವರನ್ನು ಗೌರವಿಸಿದರು. “ಹಿರಿಯ ನಾಯಕರ ಭೇಟಿ ಯುವಕರಲ್ಲಿ ಹೊಸ ಚೈತನ್ಯ ಮೂಡಿಸುತ್ತದೆ,” ಎಂದು ಅವರು ಅಭಿಪ್ರಾಯಪಟ್ಟರು. ವೇದಿಕೆಯಲ್ಲಿ ಎಸ್‌ಸಿ-ಎಸ್‌ಟಿ ಘಟಕದ ಅಧ್ಯಕ್ಷ ಚೋಮ, ತಾಲೂಕು ಉಪಾಧ್ಯಕ್ಷ ರೋಹನ್ ಪೀಟರ್ ಉಪಸ್ಥಿತರಿದ್ದರು.
ಸಭೆಯಲ್ಲಿ ವಿದ್ಯಾರ್ಥಿ ಘಟಕದ ಚಟುವಟಿಕೆಗಳನ್ನು ಮೆಚ್ಚಿದ ಯೋಗಿಶ್ ಶೆಟ್ಟಿ ಜಪ್ಪು, “ಯುವ ನಾಯಕತ್ವವೇ ಪಕ್ಷದ ಭವಿಷ್ಯ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷ ಸೇರ್ಪಡೆ ಕಾರ್ಯಕ್ರಮ
ಈ ವೇಳೆ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಜೆಡಿಎಸ್ ಪಕ್ಷವನ್ನು ಸೇರಿದರು. ಮಹಿಳಾ ಪ್ರಮುಖರಾದ ಡೈಸಿ. ಆರ್. ಪೀಟರ್ (ಉಬರಡ್ಕ, ಮಿತ್ತೂರು), ನಿವೃತ್ತ ಉಪನ್ಯಾಸಕ ಚಂದ್ರಶೇಖರ್ ಮಾಸ್ಟರ್ (ಅರಂತೋಡ್),ಉದ್ಯಮಿ ಅರುಣ್ ಚಂದ್ರಶೇಖರ್ ಹಾಗೂ ವೈದ್ಯರಾದ ಡಾ.ವಂದನ್ ಅವರನ್ನು ಯೋಗಿಶ್ ಶೆಟ್ಟಿ ಜಪ್ಪು ಪಕ್ಷದ ಶಾಲು ಹೊದಿಸಿ ಅಧಿಕೃತವಾಗಿ ಸೇರ್ಪಡೆಗೊಳಿಸಿದರು
ಸ್ಥಳೀಯ ನಾಯಕರ ಅಭಿಪ್ರಾಯ
ಸುಳ್ಯ ತಾಲೂಕು ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ ಹೊಸ ಸದಸ್ಯರಿಗೆ ಶುಭಾಶಯಗಳನ್ನು ಕೋರಿದರು ಹಾಗೂ ಯೋಗಿಶ್ ಶೆಟ್ಟಿ ಜಪ್ಪು ಅವರ ಸಕ್ರಿಯ ನಾಯಕತ್ವವನ್ನು ಪ್ರಶಂಸಿಸಿದರು.
ತಾಲೂಕು ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿಕಾನ ಮಾತನಾಡಿ, “ಸಂಘಟನೆಯನ್ನು ಬಲಪಡಿಸಲು ಕಾರ್ಯಕರ್ತರು ತಳಮಟ್ಟದಿಂದ ಸಕ್ರಿಯವಾಗಿ ಕೆಲಸ ಮಾಡಬೇಕು,” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಅನೇಕ ಸ್ಥಳೀಯ ನಾಯಕರು, ಕಾರ್ಯಕರ್ತರು ಹಾಗೂ ವಿದ್ಯಾರ್ಥಿ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು. ಈ ಭೇಟಿ ಕಾರ್ಯಕರ್ತರಲ್ಲಿ ಹೊಸ ಉತ್ಸಾಹವನ್ನು ಮೂಡಿಸಿದ್ದು, ಜೆಡಿಎಸ್ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ದಿಶೆಯಲ್ಲಿ ಮಹತ್ವದ ಹೆಜ್ಜೆಯಾಗಿ ಪರಿಣಮಿಸಿದೆ.

