ಬಂಟ್ವಾಳ : ಚಿನ್ನಾಭರಣ ದೋಚುವ ಉದ್ದೇಶದಿಂದ 80 ವರ್ಷದ ವೃದ್ಧೆಗೆ ಮೊದಲು ವಿಷ ಉಣಿಸಿ, ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಮಹಿಳೆಯೊಬ್ಬಳು ಸೇರಿದಂತೆ ಮೂವರು ಆರೋಪಿಗಳಿಗೆ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಶಿಕ್ಷೆಗೆ ಗುರಿಯಾದವರು ಬಂಟ್ವಾಳ ತಾಲೂಕಿನ ಅಮ್ಮಾಡಿ ಹೀರಾ ನಿವಾಸಿ ವಿಲ್ಮಾ ಪ್ರೆಶ್ಚಿತ್ ಬಾರೆಟೊ (30), ನರಿಕೊಂಬು ಪದಕಟ್ಟೆ ಹೊಯಿಗೆಬೈಲು ನಿವಾಸಿ ಚರಣ್ ಕುಮಾರ್ (34) ಹಾಗೂ ನರಿಕೊಂಬು ಅಂತರ ಹೌಸ್ ನಿವಾಸಿ ಸತೀಶ್ ಎ.ಆರ್. (33).
ಏನಿದು ಪ್ರಕರಣ?
2021ರ ಜನವರಿ 25ರಂದು ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಪಾಂಡೀಲು ನಿವಾಸಿ ಬೆನೆಡಿಕ್ಕಾ ಕಾರ್ಲೊ (80) ಅವರನ್ನು ಕೊಲೆ ಮಾಡಿ, ಅವರ ಮೈಯಲ್ಲಿದ್ದ ಸುಮಾರು 61.070 ಗ್ರಾಂ ತೂಕದ, ಅಂದಾಜು ₹2.75 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೂವರ ವಿರುದ್ಧ ಆರೋಪ ಸಾಬೀತಾಗಿತ್ತು.
ಮೃತ ಬೆನೆಡಿಕ್ಕಾ ಕಾರ್ಲೊ ಅವರು ತಮ್ಮ ಅಂಧ ಪತಿ ಇನಾಸ್ ಕಾರ್ಲೊ ಅವರೊಂದಿಗೆ ವಾಸವಾಗಿದ್ದರು. ಅವರ ಆರೈಕೆದಾರಳಾಗಿ ಕೆಲಸ ಮಾಡುತ್ತಿದ್ದ ವಿಲ್ಮಾ, ಚಿನ್ನಾಭರಣ ಕಳವು ಮಾಡುವ ಉದ್ದೇಶದಿಂದ ಕೊಲೆ ಸಂಚು ರೂಪಿಸಿದ್ದಳು ಎಂದು ತನಿಖೆಯಲ್ಲಿ ಬಹಿರಂಗವಾಗಿತ್ತು.
ಮೊದಲು ವಿಷ, ಬಳಿಕ ಉಸಿರುಗಟ್ಟಿಸಿ ಹತ್ಯೆ
ಪ್ರಕರಣದ ವಿವರಗಳ ಪ್ರಕಾರ, ವಿಲ್ಮಾ ತನ್ನ ಪರಿಚಯದ ಸತೀಶ್‌ನಿಂದ ಕೀಟನಾಶಕ ಪಡೆದು ಅದನ್ನು ಆಹಾರದಲ್ಲಿ ಬೆರೆಸಿ ಬೆನೆಡಿಕ್ಕಾ ಅವರಿಗೆ ನೀಡಿದ್ದಳು. ಆದರೆ ಆ ಪ್ರಯತ್ನ ವಿಫಲವಾಗಿತ್ತು.
ನಂತರ ಕಳವು ಮಾಡಿದ ಚಿನ್ನಾಭರಣದಲ್ಲಿ ಪಾಲು ನೀಡುವುದಾಗಿ ಆಮಿಷ ಒಡ್ಡಿ ಸತೀಶ್‌ನನ್ನು ತನ್ನ ಸಂಚಿನಲ್ಲಿ ಸೇರಿಸಿಕೊಂಡಿದ್ದಳು. ಸತೀಶ್ ತನ್ನ ಪರಿಚಯದ ಚರಣ್ ಕುಮಾರ್‌ನನ್ನೂ ಕರೆತಂದಿದ್ದ.
2021ರ ಜನವರಿ 25ರ ರಾತ್ರಿ ಚರಣ್ ಬೈಕ್‌ನಲ್ಲಿ ಬೆನೆಡಿಕ್ಕಾ ಅವರ ಮನೆಗೆ ತೆರಳಿದ್ದ. ವೃದ್ಧೆ ಮಲಗಿದ್ದ ವೇಳೆ ವಿಲ್ಮಾ ಮತ್ತು ಚರಣ್ ಸೇರಿ ಉಸಿರುಗಟ್ಟಿಸಿ ಕೊಲೆ ಮಾಡಿ, ಬಳಿಕ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು.
ನ್ಯಾಯಾಲಯದ ತೀರ್ಪು
ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ವಿ.ಎನ್. ಅವರು ಮೂವರು ಆರೋಪಿಗಳಿಗೆ:
- ಕೊಲೆ ಪ್ರಕರಣಕ್ಕೆ ಜೀವಾವಧಿ ಶಿಕ್ಷೆ,
- ದರೋಡೆ ಪ್ರಕರಣಕ್ಕೆ 6 ತಿಂಗಳ ಸಾದಾ ಶಿಕ್ಷೆ ಹಾಗೂ ತಲಾ ₹5,000 ದಂಡ,
- ಸಾಕ್ಷ್ಯ ನಾಶ ಮಾಡಿದ ಆರೋಪಕ್ಕೆ 1 ವರ್ಷದ ಸಾದಾ ಶಿಕ್ಷೆ ಹಾಗೂ ತಲಾ ₹1,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಎಲ್ಲಾ ಶಿಕ್ಷೆಗಳು ಏಕಕಾಲದಲ್ಲಿ (Concurrent) ಜಾರಿಯಾಗಲಿವೆ ಎಂದು ನ್ಯಾಯಾಲಯ ಆದೇಶಿಸಿದೆ.
ಪರಿಹಾರ ನೀಡಲು ಆದೇಶ
ಒಟ್ಟು ಸಂಗ್ರಹವಾಗುವ ₹33,000 ದಂಡದ ಮೊತ್ತದಲ್ಲಿ ₹8,000 ಅನ್ನು ಸರ್ಕಾರಕ್ಕೆ ಜಮಾ ಮಾಡಬೇಕು ಹಾಗೂ ₹25,000 ಅನ್ನು ಮೃತ ಬೆನೆಡಿಕ್ಕಾ ಅವರ ಪುತ್ರ ರೊನಾಲ್ಡ್ ಕಾರ್ಲೊ ಅವರಿಗೆ ಪರಿಹಾರವಾಗಿ ನೀಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
32 ಸಾಕ್ಷಿಗಳ ವಿಚಾರಣೆ
ಪ್ರಕರಣದಲ್ಲಿ ಒಟ್ಟು 32 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿತ್ತು. ಆಗಿನ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಟಿ.ಡಿ. ನಾಗರಾಜ್ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಜ್ಯೋತಿ ಪ್ರಮೋದ ನಾಯಕ್ ವಾದ ಮಂಡಿಸಿದ್ದರು.

