ಅಮೃತ ಭಾರತಿ ವಿದ್ಯಾಲಯದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ: ಯೋಧರ ತ್ಯಾಗ-ಬಲಿದಾನಗಳ ಸ್ಮರಣೆ

0
7

ಉಡುಪಿ: ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ವಿದ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿಯ ವಿದ್ಯಾರ್ಥಿ ಪ್ರಕೋಷ್ಟ ಹಾಗೂ ಕಾಲೇಜಿನ ಸಹಯೋಗದೊಂದಿಗೆ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಉಡುಪಿ ಜಿಲ್ಲಾ ಬಿಜೆಪಿ ಮುಖಂಡ ವಿಜಯ ಕೊಡವೂರು ಅವರು, “ಕಾರ್ಗಿಲ್ ಯುದ್ಧದಲ್ಲಿ ದೇಶದ ಗಡಿ ಕಾಯುತ್ತಾ ಪ್ರಾಣತ್ಯಾಗ ಮಾಡಿದ ವೀರ ಯೋಧರನ್ನು ಹಾಗೂ ಯುದ್ಧದಲ್ಲಿ ಗಾಯಗೊಂಡು ತಮ್ಮ ಅಂಗಾಂಗಗಳನ್ನು ಕಳೆದುಕೊಂಡ ದೇಶಪ್ರೇಮಿಗಳ ತ್ಯಾಗವನ್ನು ನಾವಿಂದು ಕೃತಜ್ಞತೆಯಿಂದ ಸ್ಮರಿಸಬೇಕಾಗಿದೆ.

ನಾವೆಲ್ಲರೂ ಸೈನ್ಯಕ್ಕೆ ಸೇರಲು ಸಾಧ್ಯವಾಗದಿರಬಹುದು, ಆದರೆ ಶಿಕ್ಷಣ ಮುಗಿದ ನಂತರ ಕೇವಲ ಸ್ವಂತ ಲಾಭಕ್ಕಾಗಿ ಮತ್ತು ಕುಟುಂಬ ನಿರ್ವಹಣೆಗಾಗಿ ಮಾತ್ರವೇ ದುಡಿಯದೆ, ಅದರ ಜೊತೆಗೆ ಸಮಾಜ, ದೇಶ ಮತ್ತು ಧರ್ಮದ ರಕ್ಷಣೆಗೆ ಶ್ರಮಿಸುವ ಜವಾಬ್ದಾರಿ ನಮ್ಮ ಮೇಲಿದೆ. ಇಂತಹ ಉತ್ತಮ ರಾಷ್ಟ್ರೀಯ ಮೌಲ್ಯಗಳು ಹಾಗೂ ಸಂಸ್ಕಾರವನ್ನು ಕಲಿಸುವ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ನಿಜಕ್ಕೂ ಭಾಗ್ಯವಂತರು,” ಎಂದು ಹೇಳಿದರು.


ಪ್ರಮುಖ ಅತಿಥಿಗಳು ಮತ್ತು ಗಣ್ಯರು: ಕಾರ್ಯಕ್ರಮದಲ್ಲಿ ಮಾಜಿ ಸೇನಾನಿ ಅಭಿಜಿತ್ ಸಿಂಗ್, ಹಿರಿಯ ಲೇಖಕರಾದ ಬಾಲಕೃಷ್ಣ, ಪ್ರಮುಖರಾದ ಗುರುದಾಸ್ ಶೆಣೈ, ರಾಜೇಶ್ ನಾಯ್ಕ್, ಮಿತೇಶ್ ಕುಮಾರ್ ಕೊಣಾಜೆ, ಮಹೇಶ್ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಪ್ರಕಾಶ್ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
​ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯ ಶೌರ್ಯ ಹಾಗೂ ತ್ಯಾಗದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಯಿತು. ಯುವಜನತೆಯಲ್ಲಿ ದೇಶಭಕ್ತಿ, ರಾಷ್ಟ್ರಪ್ರೇಮ ಮತ್ತು ಸಮಾಜಸೇವೆಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರೇರಣಾದಾಯಿ ಸಂದೇಶಗಳನ್ನು ನೀಡಲಾಯಿತು.