ಬಂಟ್ವಾಳ : ಇಲ್ಲಿನ ಪಾಣೆಮಂಗಳೂರು ಆಲಡ್ಕ ಎಸ್ ಎಸ್.ಅಡಿಟೋರಿಯಂ ಸಭಾಂಗಣದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮತ್ತು ಬಂಟ್ವಾಳ ತಾಲ್ಲೂಕು ಬ್ಯಾರಿ ಸಾಹಿತ್ಯ ಪರಿಷತ್ತಿನ ವತಿಯಿಂದ ಮೇ.12ರಂದು ತಾಲ್ಲೂಕು ಮಟ್ಟದ ‘ಬ್ಯಾರಿ ಸಾಹಿತ್ಯ ಸಮ್ಮೇಳನ’ ಆಯೋಜಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಉಮ್ಮರ್ ಯು.ಎಚ್. ಹೇಳಿದ್ದಾರೆ.
ಇಲ್ಲಿನ ಬಿ.ಸಿ.ರೋಡಿನಲ್ಲಿ ಶನಿವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ ಅಂದು ಬೆಳಿಗ್ಗೆ ಗಂಟೆ 9.30ಕ್ಕೆ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲಾ ಬಳಿಯಿಂದ ಹೊರಡುವ ಆಕರ್ಷಕ ಮೆರವಣಿಗೆಗೆ ಸ್ವಾಗತ ಸಮಿತಿ ಗೌರವ ಸಲಹೆಗಾರ ಪಿ. ಮುಹಮ್ಮದ್ ರಫೀಕ್ ಚಾಲನೆ ನೀಡುವರು’ ಎಂದರು. 10 ಗಂಟೆಗೆ ಧ್ವಜಾರೋಹಣ ನೆರವೇರಲಿದ್ದು, 10.30ಕ್ಕೆ ವಿಧಾನಸಭಾಧ್ಯಕ್ಷ ಯು. ಟಿ. ಖಾದರ್ ಫರೀದ್ ಸಮ್ಮೇಳನ ಉದ್ಘಾಟಿಸುವರು. ಹಿರಿಯ ಕವಿ, ಗಾಯಕ ರಹೀಂ ಬಿ.ಸಿ.ರೋಡು ಸಮ್ಮೇಳನಾಧ್ಯಕ್ಷರ ಭಾಷಣ ಮಾಡಲಿದ್ದು, ಶಾಸಕ ಯು. ರಾಜೇಶ್ ನಾಯ್ಕ್ ಉಳಿಪಾಡಿ ಅವರು ಉಮೈರತ್ ಕುಮೇರ್ ಇವರ ‘ಬೈಲ್ ಮಲೆ’ (ಬ್ಯಾರಿ ಕಥಾಸಂಕಲನ) ಪುಸ್ತಕ ಬಿಡುಗಡೆಗೊಳಿಸುವರು. ಗೇರು ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಬಿ.ಎಚ್. ಖಾದರ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಾಕ್ಷ ಎಂ.ಎಸ್. ಮುಹಮ್ಮದ್, ಪ್ರಮುಖರಾದ ಬಿ. ಅಬ್ದುಲ್ ಸಲಾಂ ತುಂಬೆ, ಡಾ. ಅಬ್ದುಲ್ ಬಶೀರ್ ವಿ.ಕೆ., ಸೆನೆಟ್ ಸದಸ್ಯ ಡಾ. ಮುಸ್ತಪಾ ಬಸ್ತಿಕೋಡಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮುಮ್ತಾಝ್, ಹಿರಿಯ ಸ್ಥಾನಿಕ ವೈದ್ಯೆ ಡಾ. ಹಸೀನಾ ಪೊನ್ನೋಡಿ ಮತ್ತಿತರ ಗಣ್ಯರು ಭಾಗವಹಿಸುವರು ಎಂದು ಅವರು ತಿಳಿಸಿದರು.
ಅಂದು ಮಧ್ಯಾಹ್ನ 12 ಗಂಟೆಗೆ ಚರ್ಚಾಗೋಷ್ಠಿ, 2 ಗಂಟೆಗೆ ಬ್ಯಾರಿ ಕವಿಗೋಷ್ಠಿ, ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಮಾಜಿ ಸಚಿವ ಬಿ. ರಮಾನಾಥ ರೈ, ರಾಜ್ಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಜಿ.ಎ. ಬಾವಾ, ಡಾ. ಬಿ.ಎಂ. ಬೀರಾನ್ ಮೊಹಿದಿನ್, ಉಸ್ಮಾನ್ ಕರೋಪಾಡಿ, ಇಬ್ರಾಹಿಂ ಅಡ್ಕಸ್ಥಳ ಮತ್ತಿತರ ಗಣ್ಯರು ಭಾಗವಹಿಸುವರು. ಇದೇ ವೇಳೆ ದಫ್, ಬ್ಯಾರಿ ಹಾಡುಗಳ ಸಂಭ್ರಮ ಮತ್ತು ‘ತೆರು ತಪ್ಪಿರ್’ ಬ್ಯಾರಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಮುಹಮ್ಮದ್ ಹನೀಫ್ ಗೋಳ್ತಮಜಲು, ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಂ. ಅಬ್ಬಾಸ್ ಆಲಿ, ಅಕಾಡೆಮಿ ಸದಸ್ಯ ಅಬೂಬಕರ್ ಅನಿಲಕಟ್ಟೆ, ಉದ್ಯಮಿ ಹಂಝ ಬಸ್ತಿಕೋಡಿ, ಲತೀಫ್ ನೇರಳಕಟ್ಟೆ, ಪಿ.ಎಂ.ಅಶ್ರಫ್, ಮುಸ್ತಾಫ ಆಲಡ್ಕ, ಯೂಸುಫ್ ಕರಂದಾಡಿ ಇದ್ದರು.
