-ಮಂದಾರ ರಾಜೇಶ್ ಭಟ್
ಇಂದು ನಾವು ತಾಯಂದಿರ ದಿನವನ್ನು ಕೇವಲ ಸಾಮಾಜಿಕ ಜಾಲತಾಣದ ‘ಸ್ಟೇಟಸ್’ಗಳಿಗೆ ಸೀಮಿತಗೊಳಿಸುತ್ತಿದ್ದೇವೆ. ಒಂದು ಸುಂದರ ಫೋಟೋ, ಒಂದೆರಡು ಸಾಲಿನ ಹೊಗಳಿಕೆ ಹಾಕಿದರೆ ನಮ್ಮ ಜವಾಬ್ದಾರಿ ಮುಗಿಯಿತು ಅಂದುಕೊಳ್ಳುತ್ತೇವೆ.
ಆದರೆ, ನಿಜವಾದ ಅಗತ್ಯ ಇರುವುದು ದಿನದ ಪ್ರದರ್ಶನದಲ್ಲಲ್ಲ, ಬದುಕಿನ ಪ್ರತಿ ಕ್ಷಣದ ಗೌರವದಲ್ಲಿ.
ಇಂದಿನ ತಾಯಂದಿರು ಎದುರಿಸುತ್ತಿರುವ ಅತಿದೊಡ್ಡ ಸವಾಲು ‘ಒಂಟಿತನ’. ತಂತ್ರಜ್ಞಾನ ಬೆಳೆದಂತೆ ನಾವು ಮೊಬೈಲ್ ಪರದೆಯೊಳಗೆ ಮುಳುಗಿದ್ದೇವೆ, ಆದರೆ ಪಕ್ಕದಲ್ಲೇ ಕುಳಿತಿರುವ ತಾಯಿಯ ಮನಸ್ಸಿನ ಮೌನವನ್ನು ಓದಲು ಮರೆಯುತ್ತಿದ್ದೇವೆ.
ಅವರು ಬಯಸುವುದು ಬೆಲೆಬಾಳುವ ಸೀರೆಯನ್ನಲ್ಲ ಅಥವಾ ಬಂಗಾರದ ಒಡವೆಯನ್ನಲ್ಲ; ಬದಲಾಗಿ ನೀವು ಅವರ ಪಕ್ಕದಲ್ಲಿ ಕುಳಿತು ಆಡುವ ಎರಡು ಪ್ರೀತಿಯ ಮಾತುಗಳನ್ನು ಮತ್ತು ಅವರ ಶ್ರಮಕ್ಕೆ ನೀವು ನೀಡುವ ಒಂದು ಸಣ್ಣ ಮಾನ್ಯತೆಯನ್ನು.

ಹೆಸರಲ್ಲಿದೆ ಕೋಟಿ ಜನ್ಮದ ಪುಣ್ಯ
ತಾಯಿ ಎಂಬ ಪದಕ್ಕೆ ಸಾವಿರಾರು ಆಯಾಮಗಳಿವೆ. ಅವಳನ್ನು ಕರೆಯುವ ಪ್ರತಿ ಹೆಸರಿನಲ್ಲೂ ಒಂದು ವಿಶೇಷವಾದ ಭಾವವಿದೆ.
ಅಮ್ಮ: ಈ ಎರಡಕ್ಷರದಲ್ಲಿ ಇಡೀ ಬ್ರಹ್ಮಾಂಡವೇ ಅಡಗಿದೆ. ಇದು ಕೇವಲ ಕರೆಯಲ್ಲ, ಒಂದು ಸುರಕ್ಷಿತ ಭಾವನೆ.
ಮಾತೃಶ್ರೀ: ತಾಯಿಯ ಗೌರವ ಮತ್ತು ಪೂಜನೀಯ ಸ್ಥಾನವನ್ನು ಎತ್ತಿ ಹಿಡಿಯುವ ಪವಿತ್ರ ಸಂಬೋಧನೆ.
ಅವ್ವ: ಮಣ್ಣಿನ ವಾಸನೆಯಿರುವ, ಅಪ್ಪಟ ಪ್ರೀತಿಯ ಹಳ್ಳಿ ಸೊಗಡಿನ ಕರೆಯಿದು. ಇದರಲ್ಲಿ ಮುಗ್ಧತೆ ಮತ್ತು ಮಮತೆ ಎರಡೂ ಇದೆ.
ಜನನಿ: ಜೀವ ನೀಡಿದವಳು ಎಂಬ ಅರ್ಥದಲ್ಲಿ ಸೃಷ್ಟಿಯ ಮೂಲವನ್ನೇ ನೆನಪಿಸುವ ಹೆಸರು.
ತಾಯಿ: ಸಂಕಷ್ಟದ ಸಮಯದಲ್ಲಿ ನೆರಳಾಗಿ ನಿಲ್ಲುವ, ದಾರಿದೀಪವಾಗುವ ಶಕ್ತಿಯ ಹೆಸರು.
ಇಂದಿನ ಅಗತ್ಯ ಆಚರಣೆಯಲ್ಲ, ಆತ್ಮೀಕ ಕಾಳಜಿ
ಪ್ರಸ್ತುತ ಕಾಲಘಟ್ಟದಲ್ಲಿ ತಾಯಂದಿರನ್ನು ಕೇವಲ ‘ಮನೆಗೆಲಸ ಮಾಡುವ ಯಂತ್ರ’ಗಳಂತೆ ಕಾಣುವುದನ್ನು ನಿಲ್ಲಿಸಬೇಕಿದೆ. ಅವರಿಗೆ ವಿಶ್ರಾಂತಿಯ ಅಗತ್ಯವಿದೆ, ಅವರೂ ಕೂಡ ಮನುಷ್ಯರು ಎಂಬ ಅರಿವು ನಮಗಿರಬೇಕು.
ಒಂದು ಸಣ್ಣ ಕಿವಿಮಾತು,
ನಿಮ್ಮ ತಾಯಿ ವಯಸ್ಸಾದಂತೆ ಅಸಹಾಯಕರಾಗಬಹುದು, ಒಂದೇ ವಿಷಯವನ್ನು ಹತ್ತು ಬಾರಿ ಕೇಳಬಹುದು. ಅಂದು ತಾಳ್ಮೆ ಕಳೆದುಕೊಳ್ಳಬೇಡಿ. ನೆನಪಿರಲಿ, ನೀವು ಬಾಲ್ಯದಲ್ಲಿ ನೂರು ಬಾರಿ ‘ಯಾಕೆ?’ ಎಂದು ಕೇಳಿದಾಗಲೂ ಅವರು ನಗುತ್ತಲೇ ಉತ್ತರ ನೀಡಿದ್ದರು.
ಇಂದು ಅವರಿಗೆ ನಿಮ್ಮ ಸಮಯ ಮತ್ತು ತಾಳ್ಮೆ ಎರಡೂ ಅತ್ಯಗತ್ಯ. ಅಮ್ಮನ ಪ್ರೀತಿಯನ್ನು ಅಳೆಯಲು ಸಾಧ್ಯವಿಲ್ಲ, ಆದರೆ ಅವಳ ಕಣ್ಣೀರು ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ಖಂಡಿತ ನಮ್ಮ ಮೇಲಿದೆ.
ಅವಳಿಗಾಗಿ ಪ್ರತಿದಿನವೂ ಒಂದು ‘ತಾಯಂದಿರ ದಿನ’ವಾಗಲಿ.

