ಉಜಿರೆ : ಯೋಜನೆ ಮತ್ತು ಸಾಂಖ್ಯಿಕ ಸಚಿವರಾಗಿದ್ದ ಮಾನ್ಯ ಡಿ. ಸುಧಾಕರ್ ಚಳ್ಳಕೆರೆ ಅವರ ನಿಧನದ ಸುದ್ದಿ ತಿಳಿದು ತೀವ್ರ ವಿಷಾದವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸಂತಾಪ ಸೂಚಿಸಿದ್ದಾರೆ.
ರಾಜಕೀಯ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದ ಡಿ. ಸುಧಾಕರ್ ಅವರು ಶಾಸಕರಾಗಿ ಹಾಗೂ ಸಚಿವರಾಗಿ ಜನಪರ ಸೇವೆ ಸಲ್ಲಿಸಿದ್ದು, ಜನಾನುರಾಗಿಯಾಗಿದ್ದರು ಎಂದು ಅವರು ಸ್ಮರಿಸಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳದ ಅಪಾರ ಭಕ್ತರಾಗಿದ್ದ ಅವರು ಅನೇಕ ಬಾರಿ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದು, ಆತ್ಮೀಯವಾಗಿ ಮಾತುಕತೆ ನಡೆಸುತ್ತಿದ್ದರು ಎಂದು ಹೆಗ್ಗಡೆಯವರು ತಿಳಿಸಿದ್ದಾರೆ.
ಇತ್ತೀಚೆಗೆ ಧರ್ಮಸ್ಥಳಕ್ಕೆ ಆಗಮಿಸಿದ ವೇಳೆ ಆನೆ ಮರಿ ‘ಶಿವಾನಿ’ಯ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಂತೋಷದಿಂದ ಭಾಗವಹಿಸಿದ್ದ ಕ್ಷಣಗಳು ಇನ್ನೂ ನೆನಪಿನಲ್ಲಿವೆ ಎಂದು ಅವರು ಹೇಳಿದ್ದಾರೆ.
ಸರಕಾರ ನೀಡಿದ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದ ಡಿ. ಸುಧಾಕರ್ ಅವರು ಪಕ್ಷದ ವರಿಷ್ಠರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದರು ಎಂದು ಹೆಗ್ಗಡೆಯವರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಧರ್ಮಸ್ಥಳದಲ್ಲಿ ನಡೆದ ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಸಮಿತಿಯ ಸಭೆಗಳಲ್ಲಿ ಆಸಕ್ತಿಯಿಂದ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಕ್ರಿಯ ಸಹಕಾರ ನೀಡುತ್ತಿದ್ದರು ಎಂದು ಅವರು ನೆನಪಿಸಿಕೊಂಡಿದ್ದಾರೆ.
ಅಲ್ಪಕಾಲದ ಅನಾರೋಗ್ಯದಿಂದ ಅಗಲಿದ ಡಿ. ಸುಧಾಕರ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಕುಟುಂಬಸ್ಥರಿಗೆ ಈ ದುಃಖವನ್ನು ಭರಿಸುವ ಶಕ್ತಿ ಮತ್ತು ತಾಳ್ಮೆಯನ್ನು ಶ್ರೀ ಮಂಜುನಾಥ ಸ್ವಾಮಿ ಕರುಣಿಸಲಿ ಎಂದು ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಪ್ರಾರ್ಥಿಸಿದ್ದಾರೆ.
