ಮಹದೇಶ್ವರ ಬೆಟ್ಟದಲ್ಲಿ ಮತ್ತೆ ಚಿರತೆ ದಾಳಿ: ಪಾದಯಾತ್ರೆ ವೇಳೆ 8 ವರ್ಷದ ಬಾಲಕ ಬಲಿ..!

0
12

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ಮತ್ತೊಮ್ಮೆ ನರಭಕ್ಷಕ ಚಿರತೆ ದಾಳಿ ನಡೆಸಿದ್ದು, ಪಾದಯಾತ್ರೆಯಲ್ಲಿ ತೆರಳುತ್ತಿದ್ದ 8 ವರ್ಷದ ಬಾಲಕನನ್ನು ಕೊಂದು ತಿಂದು ತೇಗಿದ ಭೀಕರ ಘಟನೆ ನಡೆದಿದೆ. ಈ ಘಟನೆ ಭಕ್ತರಲ್ಲಿ ಭಾರೀ ಆತಂಕ ಸೃಷ್ಟಿಸಿದೆ.

ಬೆಂಗಳೂರು ಮೂಲದ ಹರ್ಷಿತ್ (8) ಮೃತ ಬಾಲಕ ಎಂದು ಗುರುತಿಸಲಾಗಿದೆ. ಬಾಲಕ ತನ್ನ ಪೋಷಕರೊಂದಿಗೆ ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಪಾದಯಾತ್ರೆ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.

ದಟ್ಟ ಅರಣ್ಯದಲ್ಲಿ ಚಿರತೆ ದಾಳಿ

ಇಂದು ಮುಂಜಾನೆ ಸುಮಾರು 7 ಗಂಟೆ ವೇಳೆಗೆ ದಟ್ಟ ಅರಣ್ಯದ ಮಾರ್ಗದಲ್ಲಿ ಕುಟುಂಬ ಸಾಗುತ್ತಿದ್ದಾಗ, ಪೊದೆಯಲ್ಲಿ ಹೊಂಚು ಹಾಕಿದ್ದ ಚಿರತೆ ಏಕಾಏಕಿ ಬಾಲಕನ ಮೇಲೆ ದಾಳಿ ನಡೆಸಿದೆ. ಕ್ಷಣಾರ್ಧದಲ್ಲಿ ಬಾಲಕನನ್ನು ಕಾಡಿನೊಳಗೆ ಎಳೆದೊಯ್ದಿದ್ದು, ಕುಟುಂಬಸ್ಥರು ಕಿರುಚಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ನಂತರ ಅರಣ್ಯ ಪ್ರದೇಶದಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದ್ದು, ಚಿರತೆ ದೇಹದ ಕೆಲವು ಭಾಗಗಳನ್ನು ಭಕ್ಷಿಸಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳಕ್ಕೆ ಅರಣ್ಯ ಇಲಾಖೆ, ಪೊಲೀಸ್ ಭೇಟಿ

ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಮಲೆ ಮಹದೇಶ್ವರ ಬೆಟ್ಟದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆಯನ್ನು ಸೆರೆಹಿಡಿಯಲು ಕಾರ್ಯಾಚರಣೆ ಆರಂಭಿಸಲಾಗಿದೆ.

ಇದೇ ಮಾರ್ಗದಲ್ಲಿ ಮೂರನೇ ದಾಳಿ

ಮಲೆ ಮಹದೇಶ್ವರ ಬೆಟ್ಟದ ಮಾರ್ಗದಲ್ಲಿ ಚಿರತೆ ದಾಳಿ ಪ್ರಕರಣಗಳು ಹೆಚ್ಚುತ್ತಿವೆ.

  • ಜನವರಿ 21ರಂದು ಮಂಡ್ಯ ಜಿಲ್ಲೆಯ ಪ್ರವೀಣ್ ಎಂಬ ಭಕ್ತ ಚಿರತೆ ದಾಳಿಗೆ ಬಲಿಯಾಗಿದ್ದರು.
  • ಫೆಬ್ರವರಿಯಲ್ಲಿ ಚನ್ನಪಟ್ಟಣದ ಶ್ರೇಯಸ್ (8) ಎಂಬ ಬಾಲಕನ ಮೇಲೂ ದಾಳಿ ನಡೆದಿತ್ತು. ಅದೃಷ್ಟವಶಾತ್ ಆತ ಬದುಕುಳಿದಿದ್ದ.

ಈ ಹಿಂದೆ ಟಿ. ನರಸೀಪುರ ಹಾಗೂ ಹನೂರು ಭಾಗಗಳಲ್ಲಿ ಸರಣಿ ಚಿರತೆ ದಾಳಿಗಳು ನಡೆದ ಹಿನ್ನೆಲೆ ಅರಣ್ಯ ಇಲಾಖೆ ‘ಲೆಪರ್ಡ್ ಟಾಸ್ಕ್ ಫೋರ್ಸ್’ ರಚಿಸಿ ನರಭಕ್ಷಕ ಚಿರತೆಗಳನ್ನು ಸೆರೆಹಿಡಿದಿತ್ತು.

ಪದೇ ಪದೇ ಚಿರತೆ ದಾಳಿಯಿಂದ ಜನರು ಸಾವನ್ನಪ್ಪುತ್ತಿದ್ದರೂ, ಮಲೆ ಮಹದೇಶ್ವರ ವನ್ಯಜೀವಿಧಾಮದ ಅಧಿಕಾರಿಗಳು ಸಮರ್ಪಕ ಭದ್ರತೆ ಒದಗಿಸುತ್ತಿಲ್ಲ ಎಂದು ಭಕ್ತರು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾದಯಾತ್ರೆ ಮಾರ್ಗಗಳಲ್ಲಿ ಹೆಚ್ಚುವರಿ ಭದ್ರತೆ ಮತ್ತು ನಿಗಾವಹಿಸಲು ಆಗ್ರಹ ಕೇಳಿಬಂದಿದೆ.

LEAVE A REPLY

Please enter your comment!
Please enter your name here