ಬೆಂಗಳೂರು : ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ನೀಡಲಾಗುತ್ತಿರುವ ಪಡಿತರ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲು ಆಹಾರ ಇಲಾಖೆ ಮುಂದಾಗಿದೆ. ಇನ್ನು ಮುಂದೆ ಕೇವಲ ಅಕ್ಕಿ ಮಾತ್ರವಲ್ಲದೆ, ಪ್ರದೇಶದ ಆಹಾರ ಪದ್ಧತಿಗೆ ಅನುಗುಣವಾಗಿ ರಾಗಿ ಹಾಗೂ ಜೋಳವನ್ನೂ ವಿತರಿಸಲು ಸರ್ಕಾರ ನಿರ್ಧರಿಸಿದೆ.
ಪ್ರಸ್ತುತ ಅನ್ನಭಾಗ್ಯ ಯೋಜನೆಯಡಿ ಪ್ರತಿ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿ ನೀಡಲಾಗುತ್ತಿದೆ. ಆದರೆ ಬದಲಾಗುತ್ತಿರುವ ಆಹಾರ ಪದ್ಧತಿಯಿಂದ ಹಲವಾರು ಕುಟುಂಬಗಳಲ್ಲಿ ಅಕ್ಕಿ ಬಳಕೆ ಕಡಿಮೆಯಾಗಿದ್ದು, ಹೆಚ್ಚುವರಿ ಅಕ್ಕಿ ಉಳಿಯುತ್ತಿರುವ ಹಿನ್ನೆಲೆ ಅಕ್ಕಿಯ ಬದಲಿಗೆ ಬೇರೆ ಆಹಾರಧಾನ್ಯ ನೀಡುವಂತೆ ಸಾರ್ವಜನಿಕರಿಂದ ಬೇಡಿಕೆ ಕೇಳಿಬಂದಿತ್ತು.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇನ್ನು ಮುಂದೆ ಪ್ರತಿ ಸದಸ್ಯರಿಗೆ 8 ಕೆಜಿ ಅಕ್ಕಿಯ ಜೊತೆಗೆ 2 ಕೆಜಿ ರಾಗಿ ಅಥವಾ ಜೋಳ ವಿತರಣೆ ಮಾಡಲು ತೀರ್ಮಾನಿಸಿದೆ.
ರಾಗಿ ಖರೀದಿಗೆ ಸರ್ಕಾರ ಸಜ್ಜು
ಬಿಪಿಎಲ್ ಕುಟುಂಬಗಳಿಗೆ ಪ್ರತಿ ತಿಂಗಳು ರಾಗಿ ವಿತರಿಸಲು ರಾಜ್ಯ ಸರ್ಕಾರ ದೊಡ್ಡ ಪ್ರಮಾಣದಲ್ಲಿ ರಾಗಿ ಖರೀದಿಗೆ ಮುಂದಾಗಿದೆ. ರೈತರಿಂದ ನೇರವಾಗಿ ರಾಗಿ ಖರೀದಿ ಮಾಡಲು ಅವಕಾಶ ನೀಡಲಾಗಿದ್ದು, ಮೇ 15ರೊಳಗೆ ನೋಂದಣಿ ಮಾಡಲು ಆಹ್ವಾನಿಸಲಾಗಿದೆ. ಸರ್ಕಾರ ಸುಮಾರು 6 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿ ಮಾಡುವ ಗುರಿ ಹೊಂದಿದೆ ಎಂದು ತಿಳಿದುಬಂದಿದೆ.
ಪ್ರದೇಶಕ್ಕೆ ತಕ್ಕ ಪಡಿತರ ವಿತರಣೆ
ರಾಜ್ಯದ ವಿವಿಧ ಭಾಗಗಳ ಆಹಾರ ಸಂಸ್ಕೃತಿಯನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ.
- ಹಳೆ ಮೈಸೂರು ಭಾಗದ ಜನರಿಗೆ 8 ಕೆಜಿ ಅಕ್ಕಿಯ ಜೊತೆಗೆ 2 ಕೆಜಿ ರಾಗಿ
- ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ 8 ಕೆಜಿ ಅಕ್ಕಿಯ ಜೊತೆ 2 ಕೆಜಿ ಜೋಳ
ವಿತರಣೆ ಮಾಡಲು ಸರ್ಕಾರ ನಿರ್ಧರಿಸಿದೆ.
ರೈತರಿಗೆ ಸಹ ಲಾಭ
ಈ ಹೊಸ ಯೋಜನೆಯಿಂದ ರಾಗಿ ಹಾಗೂ ಜೋಳ ಬೆಳೆಗಾರ ರೈತರಿಗೆ ಉತ್ತಮ ಮಾರುಕಟ್ಟೆ ಸಿಗಲಿದ್ದು, ಕೃಷಿಕರಿಗೆ ಆರ್ಥಿಕ ಲಾಭವಾಗುವ ನಿರೀಕ್ಷೆಯಿದೆ.
ಈ ಕುರಿತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಮಾಹಿತಿ ನೀಡಿದ್ದು, ಹೊಸ ವ್ಯವಸ್ಥೆ ಇದೇ ತಿಂಗಳಿಂದ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.

