ಬಾಯಿ ರುಚಿ ಕೆಟ್ಟಿದೆಯಾ? ನಾಲ್ಕು ಈರುಳ್ಳಿಯಲ್ಲಿ ಸೂಪರ್ ಚಟ್ನಿ ರೆಡಿ!

0
46

ಅಡಿಗೆಮನೆಯಲ್ಲಿ ಸರಳವಾಗಿ ಸಿಗುವ ಕೆಲವೇ ಪದಾರ್ಥಗಳನ್ನು ಬಳಸಿ ಕೇವಲ 10 ನಿಮಿಷಗಳಲ್ಲಿ ರುಚಿಕರ ಈರುಳ್ಳಿ ಚಟ್ನಿ ತಯಾರಿಸಬಹುದು. ಬಾಯಿ ರುಚಿ ಕೆಟ್ಟಾಗ ಅಥವಾ ಬಿಸಿ ಅನ್ನ, ದೋಸೆ, ರೊಟ್ಟಿ, ಪೂರಿಗೆ ವಿಭಿನ್ನ ಸೈಡ್ ಡಿಶ್ ಬೇಕಾದರೆ ಈ ಚಟ್ನಿ ಉತ್ತಮ ಆಯ್ಕೆಯಾಗಿದೆ.

ಈ ಚಟ್ನಿ ಮಾಡಲು ಮುಖ್ಯವಾಗಿ ನಾಲ್ಕು ಈರುಳ್ಳಿ, ಟೊಮೆಟೋ, ಬೆಳ್ಳುಳ್ಳಿ ಮತ್ತು ಕೆಲವು ಮಸಾಲೆ ಪದಾರ್ಥಗಳು ಸಾಕು. ಖಾರ, ಹುಳಿ ಹಾಗೂ ಈರುಳ್ಳಿಯ ಸಿಹಿ ರುಚಿ ಸೇರಿ ಈ ಚಟ್ನಿಗೆ ವಿಶೇಷ ಸ್ವಾದ ನೀಡುತ್ತದೆ.

ಬೇಕಾಗುವ ಸಾಮಗ್ರಿಗಳು:

  • ಈರುಳ್ಳಿ – 4
  • ಟೊಮೆಟೋ – 2
  • ಬೆಳ್ಳುಳ್ಳಿ – 10 ಎಸಳು
  • ಹುಣಸೆಹಣ್ಣು – ಅಡಿಕೆ ಗಾತ್ರದಷ್ಟು
  • ಸಾಸವೆ – 1/4 ಟೀ ಸ್ಪೂನ್
  • ಜೀರಿಗೆ – 1/2 ಟೀ ಸ್ಪೂನ್
  • ಕಡಲೆಬೇಳೆ – 1/2 ಟೀ ಸ್ಪೂನ್
  • ಮೆಂತ್ಯೆ – 8 ರಿಂದ 10 ಕಾಳು
  • ಧನಿಯಾ – 1/4 ಟೀ ಸ್ಪೂನ್
  • ಬ್ಯಾಡಗಿ ಮೆಣಸಿನಕಾಯಿ – 10
  • ಕರಿಬೇವು, ಕೋತಂಬರಿ ಸೊಪ್ಪು
  • ಎಣ್ಣೆ ಮತ್ತು ಉಪ್ಪು – ಅಗತ್ಯಕ್ಕೆ ತಕ್ಕಷ್ಟು

ಮಾಡುವ ವಿಧಾನ:

ಮೊದಲಿಗೆ ಬಾಣಲೆಗೆ ಎಣ್ಣೆ ಹಾಕಿ ಬಿಸಿ ಆದ ಬಳಿಕ ಸಾಸವೆ, ಜೀರಿಗೆ, ಕಡಲೆಬೇಳೆ, ಮೆಂತ್ಯೆ, ಧನಿಯಾ, ಬ್ಯಾಡಗಿ ಮೆಣಸಿನಕಾಯಿ ಹಾಗೂ ಬೆಳ್ಳುಳ್ಳಿಯನ್ನು ಹಾಕಿ ಕಡಿಮೆ ಉರಿಯಲ್ಲಿ ಚೆನ್ನಾಗಿ ಹುರಿಯಿರಿ. ನಂತರ ಅದನ್ನು ಬೇರೆ ಪಾತ್ರೆಗೆ ತೆಗೆದು ಇಡಿ.

ಅದೇ ಬಾಣಲೆಗೆ ಕತ್ತರಿಸಿದ ಈರುಳ್ಳಿ ಹಾಗೂ ಹುಣಸೆಹಣ್ಣು ಹಾಕಿ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಬೇಕು. ನಂತರ ಟೊಮೆಟೋ ಸೇರಿಸಿ 2-3 ನಿಮಿಷ ಬೇಯಿಸಿ ಒಲೆ ಆರಿಸಬೇಕು.

ಈ ಮಿಶ್ರಣ ಮತ್ತು ಹುರಿದ ಮಸಾಲೆಗಳನ್ನು ಮಿಕ್ಸಿ ಜಾರ್‌ಗೆ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. ಬಳಿಕ ಸಾಸವೆ, ಜೀರಿಗೆ ಮತ್ತು ಕರಿಬೇವಿನ ಒಗ್ಗರಣೆ ಹಾಕಿ, ಉಪ್ಪು ಸೇರಿಸಿ ಚೆನ್ನಾಗಿ ಕಲಸಿದರೆ ರುಚಿಕರ ಈರುಳ್ಳಿ ಚಟ್ನಿ ಸವಿಯಲು ಸಿದ್ಧ.

ಕೊನೆಯಲ್ಲಿ ಕೋತಂಬರಿ ಸೊಪ್ಪು ಸೇರಿಸಿದರೆ ರುಚಿ ಇನ್ನಷ್ಟು ಹೆಚ್ಚುತ್ತದೆ.

LEAVE A REPLY

Please enter your comment!
Please enter your name here