ಹಯಾಬುಸಾ ಬೈಕ್ ಭೀಕರ ಅಪಘಾತ : ಯು-ಟರ್ನ್ ತೆಗೆದುಕೊಳ್ಳುತ್ತಿದ್ದ ಕಾರಿಗೆ ಡಿಕ್ಕಿ, ಐವರು ದುರ್ಮರಣ..!

0
11

ತೆಲಂಗಾಣದ ಮಹಬೂಬ್‌ನಗರ ಜಿಲ್ಲೆಯ ಪಾಲಕೊಂಡ ಬೈಪಾಸ್ ರಸ್ತೆಯಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಐವರು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.

ಹೈದರಾಬಾದ್‌ನಿಂದ ಅತೀ ವೇಗದಲ್ಲಿ ಬರುತ್ತಿದ್ದ Suzuki Hayabusa ಬೈಕ್, ಯು-ಟರ್ನ್ ತೆಗೆದುಕೊಳ್ಳುತ್ತಿದ್ದ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಅಪಘಾತದ ತೀವ್ರತೆಗೆ ಬೈಕ್‌ನಲ್ಲಿದ್ದ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದು, ಕಾರಿನಲ್ಲಿದ್ದ ಒಂದೇ ಕುಟುಂಬದ ಮಹಿಳೆ ಹಾಗೂ ಇಬ್ಬರು ಮಕ್ಕಳು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಮೃತರನ್ನು ಅರ್ಶಿಯಾ ಬೇಗಂ (30), ಏಳು ವರ್ಷದ ಉಜೆಪಾ ಹಾಗೂ ಎರಡು ವರ್ಷದ ಅಮರ್ ಎಂದು ಗುರುತಿಸಲಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಸುಮಾರು 140 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ಹಯಾಬುಸಾ ಬೈಕ್ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ಬಳಿಕ ಬೈಕ್ ಸವಾರರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಮೃತ ಬೈಕ್ ಸವಾರರಲ್ಲಿ ಒಬ್ಬರನ್ನು 25 ವರ್ಷದ ಯಾಕೂಬ್ ಅಫ್ಜಲ್ ಎಂದು ಗುರುತಿಸಲಾಗಿದ್ದು, ಮತ್ತೊಬ್ಬರ ಗುರುತು ಇನ್ನೂ ಪತ್ತೆಯಾಗಿಲ್ಲ.

Suzuki Hayabusa ವಿಶ್ವದ ಅತೀ ವೇಗದ ಮೋಟಾರ್‌ಸೈಕಲ್‌ಗಳಲ್ಲಿ ಒಂದಾಗಿ ಪ್ರಸಿದ್ಧಿಯಾಗಿದ್ದು, ಗಂಟೆಗೆ 300 ಕಿ.ಮೀ ವೇಗ ತಲುಪುವ ಸಾಮರ್ಥ್ಯ ಹೊಂದಿದೆ. ಅತೀ ವೇಗ ಹಾಗೂ ನಿಯಂತ್ರಣ ತಪ್ಪಿದ್ದೇ ಈ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಶಂಕಿಸಲಾಗಿದೆ.

ಪಾಲಕೊಂಡ ಬೈಪಾಸ್ ರಸ್ತೆ ಇತ್ತೀಚೆಗೆ ಅಕ್ರಮ ಬೈಕ್ ರೇಸಿಂಗ್ ಅಡ್ಡೆಯಾಗಿ ಮಾರ್ಪಟ್ಟಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ರಾತ್ರಿ ವೇಳೆ ಯುವಕರು ಸ್ಪೋರ್ಟ್ಸ್ ಬೈಕ್‌ಗಳಲ್ಲಿ ಅತೀ ವೇಗದಲ್ಲಿ ಸ್ಟಂಟ್‌ಗಳನ್ನು ನಡೆಸುತ್ತಿರುವುದರಿಂದ ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಹಲವು ಬಾರಿ ದೂರು ನೀಡಿದರೂ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದು, ಹೆದ್ದಾರಿಗಳಲ್ಲಿ ರಾತ್ರಿ ಗಸ್ತು ಹೆಚ್ಚಿಸುವುದು, ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಹಾಗೂ ವೇಗ ಮಿತಿಮೀರಿದ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಬೇಕೆಂದು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here