ಬೆಳಗಾವಿ : ಗೃಹಲಕ್ಷ್ಮಿ ಯೋಜನೆ ಫಲಾನುಭವಿ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ ಲಭಿಸಿದ್ದು, ಮುಂದಿನ 10 ದಿನಗಳೊಳಗೆ ಎರಡು ತಿಂಗಳ ಹಣವನ್ನು ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಬಾಗಲೂರು ಗ್ರಾಮದ ಮಹಾಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಮಾರ್ಚ್ ತಿಂಗಳ ಗೃಹಲಕ್ಷ್ಮಿ ಹಣವನ್ನು ಮುಂದಿನ ನಾಲ್ಕು ರಿಂದ ಐದು ದಿನಗಳೊಳಗೆ ಹಾಗೂ ಏಪ್ರಿಲ್ ತಿಂಗಳ ಹಣವನ್ನು ಎಂಟು ರಿಂದ ಹತ್ತು ದಿನಗಳೊಳಗೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುವುದು ಎಂದು ಹೇಳಿದರು.
“ಕೆಲಸ ಎಂದರೆ ನನಗೆ ಹುಚ್ಚು. 2013ರ ಚುನಾವಣೆಯಲ್ಲಿ ಸೋತ ನಂತರವೂ ಜನರ ಸೇವೆ ನಿಲ್ಲಿಸಲಿಲ್ಲ. ಸಮಾಜಕ್ಕೆ ಉಪಯೋಗವಾಗುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇನೆ,” ಎಂದು ಸಚಿವರು ಹೇಳಿದರು.
ರಾಜ್ಯದ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಜಾರಿಯಲ್ಲಿರುವ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಹಣ ನೀಡಲಾಗುತ್ತಿದ್ದು, ಬಾಕಿ ಉಳಿದಿದ್ದ ಎರಡು ತಿಂಗಳ ಹಣ ಬಿಡುಗಡೆ ಕುರಿತ ಘೋಷಣೆಯಿಂದ ಫಲಾನುಭವಿಗಳಲ್ಲಿ ಸಂತಸ ಮನೆಮಾಡಿದೆ.

