ಸುರತ್ಕಲ್: ಪ್ರಸಿದ್ಧ ಹವ್ಯಾಸಿ ಯಕ್ಷಗಾನ ಭಾಗವತ ಹಾಗೂ ಸಮಾಜಸೇವಕ ಕೇಶವ ಎಲ್. ಶೆಟ್ಟಿ ಅವರು ನಿಧನರಾಗಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು.
ಕೇಶವ ಎಲ್. ಶೆಟ್ಟಿ ಅವರು ಕುಡುಂಬೂರು ದಿವಂಗತ ಅಡಪರ ಮನೆಯ ಲೋಕಯ್ಯ ಶೆಟ್ಟಿ ಹಾಗೂ ಪೇಜಾವರ ಚಿಕ್ಕಪರಾರಿ ಕಲ್ಯಾಣಿ ಶೆಟ್ಟಿ ದಂಪತಿಯ ಪುತ್ರರಾಗಿದ್ದರು. ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದ ಅವರು ಕೃಷ್ಣಾಪುರ ಯುವಕ ಮಂಡಲದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಯಕ್ಷಗಾನ ಕ್ಷೇತ್ರದ ಮೇಲಿನ ಅಪಾರ ಅಭಿಮಾನದಿಂದ ಅವರು ಹವ್ಯಾಸಿ ಭಾಗವತರಾಗಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಅಲ್ಲದೆ, ಪೇಜಾವರ ಸಾರಬಳಿ ಧೂಮಾವತಿ ದೈವಸ್ಥಾನ ಸೇರಿದಂತೆ ಊರಿನ ಅನೇಕ ದೈವಸ್ಥಾನಗಳು ಮತ್ತು ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜಮುಖಿ ಸೇವೆ ಸಲ್ಲಿಸಿದ್ದರು.
ಕೇಶವ ಎಲ್. ಶೆಟ್ಟಿ ಅವರ ನಿಧನಕ್ಕೆ ಯಕ್ಷಗಾನ ಕಲಾವಿದರು, ಸಮಾಜದ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

