ಕಂಜಿಕಾ: ಬೇಸಿಗೆಯ ತೀವ್ರ ಬಿಸಿಲಿನಲ್ಲಿ ದೇಹವನ್ನು ತಂಪಾಗಿಡಲು ಹಾಗೂ ಜೀರ್ಣಕ್ರಿಯೆಯನ್ನು ಉತ್ತಮಪಡಿಸಲು ಸಹಾಯಕವಾಗುವ ಒಡಿಶಾದ ಸಾಂಪ್ರದಾಯಿಕ ಪಾನೀಯ ‘ಕಂಜಿಕಾ’ ಇದೀಗ ಆರೋಗ್ಯಕರ ಡ್ರಿಂಕ್ ಆಗಿ ಜನಪ್ರಿಯತೆ ಪಡೆಯುತ್ತಿದೆ. ಹುದುಗು ಬರಿಸಿದ ಅಕ್ಕಿ ತಿಳಿ ನೀರಿನಿಂದ ತಯಾರಾಗುವ ಈ ಪಾನೀಯದಲ್ಲಿ ನೈಸರ್ಗಿಕ ಪ್ರೋಬಯೋಟಿಕ್ ಗುಣಗಳಿದ್ದು, ಕರುಳಿನ ಆರೋಗ್ಯಕ್ಕೂ ಉತ್ತಮವಾಗಿದೆ.
ಕಂಜಿಕಾ ಪಾನೀಯದ ವಿಶೇಷತೆಗಳು
- ದೇಹದ ಉಷ್ಣತೆಯನ್ನು ಕಡಿಮೆ ಮಾಡಿ ಒಳಗಿನಿಂದ ತಂಪಾಗಿರಲು ಸಹಕಾರಿ
- ಜೀರ್ಣಕ್ರಿಯೆ ಸುಧಾರಿಸಿ ಹೊಟ್ಟೆಯ ಆರೋಗ್ಯ ಕಾಪಾಡುತ್ತದೆ
- ಬೇಸಿಗೆಯಲ್ಲಿ ನಿರ್ಜಲೀಕರಣ ತಡೆಯಲು ಸಹಾಯ ಮಾಡುತ್ತದೆ
- ಹೊಟ್ಟೆಯ ಉರಿ, ಅತಿಸಾರ ಮತ್ತು ಬಿಸಿಲಿನ ಬೇಗೆಯಿಂದ ಪರಿಹಾರ ನೀಡುತ್ತದೆ
- ದೇಹಕ್ಕೆ ಲಘು ಶಕ್ತಿ ಮತ್ತು ತಾಜಾತನ ಒದಗಿಸುತ್ತದೆ
ಬೇಕಾಗುವ ಪದಾರ್ಥಗಳು
- ಬೇಯಿಸಿದ ಅಕ್ಕಿ – 1/2 ಕಪ್
- ನೀರು – 3 ಕಪ್
- ಸಾಸಿವೆ – 1/2 ಟೀಸ್ಪೂನ್
- ಹಸಿಮೆಣಸಿನಕಾಯಿ – 1
- ಕರಿಬೇವು – 6 ರಿಂದ 8 ಎಲೆಗಳು
- ಉಪ್ಪು – 1/4 ಟೀಸ್ಪೂನ್
- ಎಣ್ಣೆ – 1 ಟೀಸ್ಪೂನ್
ತಯಾರಿಸುವ ವಿಧಾನ
ಮೊದಲು ಅಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ಬೇಯಿಸಿ, ಅದರ ಗಂಜಿ ಅಥವಾ ತಿಳಿ ನೀರನ್ನು ಪ್ರತ್ಯೇಕಿಸಿ ತಣ್ಣಗಾಗಲು ಬಿಡಿ. ಬಳಿಕ ಈ ತಿಳಿ ನೀರನ್ನು ಗಾಜಿನ ಅಥವಾ ಮಣ್ಣಿನ ಪಾತ್ರೆಗೆ ಹಾಕಿ 24 ಗಂಟೆಗಳ ಕಾಲ ಕೋಣೆಯ ಉಷ್ಣಾಂಶದಲ್ಲಿ ಹುದುಗು ಬರಲು ಬಿಡಬೇಕು.
24 ಗಂಟೆಗಳ ನಂತರ ಸ್ವಲ್ಪ ಹುಳಿ ವಾಸನೆ ಬಂದರೆ ಕಂಜಿಕಾ ಸಿದ್ಧವಾಗಿದೆ ಎಂದರ್ಥ. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಹಸಿಮೆಣಸಿನಕಾಯಿ ಹಾಗೂ ಕರಿಬೇವು ಹಾಕಿ ಒಗ್ಗರಣೆ ತಯಾರಿಸಿ, ಅದನ್ನು ಗಂಜಿ ನೀರಿಗೆ ಸೇರಿಸಿ. ಕೊನೆಯಲ್ಲಿ ಉಪ್ಪು ಹಾಕಿ ಚೆನ್ನಾಗಿ ಕಲಸಿ ಸೇವಿಸಬಹುದು.
ಗಮನಿಸಬೇಕಾದ ಅಂಶಗಳು
- ಹೆಚ್ಚು ಸಮಯ ಹುದುಗು ಬರಿಸಿದರೆ ಪಾನೀಯ ಅತಿಯಾಗಿ ಹುಳಿಯಾಗಬಹುದು
- ಯಾವಾಗಲೂ ಸ್ವಚ್ಛವಾದ ಗಾಜಿನ ಅಥವಾ ಮಣ್ಣಿನ ಪಾತ್ರೆಯನ್ನೇ ಬಳಸಿ
- ಮಿತವಾದ ಒಗ್ಗರಣೆಯು ರುಚಿಯನ್ನು ಹೆಚ್ಚಿಸುತ್ತದೆ

