ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿಜ್ಞಾನ ಕೇಂದ್ರ ಗುರಿ : ಸಚಿವ ಭೋಸರಾಜು

0
27

ಉಡುಪಿ : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿಜ್ಞಾನ ಕೇಂದ್ರಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದ್ದು, ಪ್ರಸ್ತುತ 12 ಜಿಲ್ಲೆಗಳಲ್ಲಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಕೋಲಾರ, ಚಿತ್ರದುರ್ಗ ಮತ್ತು ವಿಜಯನಗರ ಜಿಲ್ಲೆಯಲ್ಲಿ ಹೊಸ ಕೇಂದ್ರಗಳ ನಿಮಾರ್ಣಕ್ಕೆ ಟೆಂಡರ್​ ಪ್ರಕ್ರಿಯೆ ನಡೆದಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ-ತಂತ್ರಜ್ಞಾನ ಸಚಿವ ಎನ್​. ಎಸ್​. ಭೋಸರಾಜು ಹೇಳಿದರು.

ಅಲೆವೂರು ವಿಜ್ಞಾನ ಕೇಂದ್ರ ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿದರು. ಶಿವಮೊಗ್ಗ, ರಾಯಚೂರು, ಚಿಕ್ಕಮಗಳೂರು ಮತ್ತು ಯಾದಗಿರಿಯಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಪ್ರಾದೇಶಿಕ ವಿಜ್ಞಾನ ಕೇಂದ್ರಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರೊ. ಯು.ಆರ್​. ರಾವ್​ ವಿಜ್ಞಾನ ಕೇಂದ್ರ

ಉಡುಪಿಯಲ್ಲಿ ನಿಮಾರ್ಣವಾಗುತ್ತಿರುವ ವಿಜ್ಞಾನ ಕೇಂದ್ರಕ್ಕೆ ವಿಜ್ಞಾನಿ ಪ್ರೊ. ಯು.ಆರ್​. ರಾವ್​ ಹೆಸರನ್ನು ಇಡಲು ಸರ್ಕಾರ ಆದೇಶಿಸಿದೆ. 4 ಕೋಟಿ ರೂ. ಸಿವಿಲ್​ ಕಾಮಗಾರಿ ಹಾಗೂ 2.5 ಕೋಟಿ ರೂ. ಗ್ಯಾಲರಿ ನಿಮಾರ್ಣಕ್ಕೆ ವ್ಯಯಿಸಲಾಗುತ್ತಿದೆ. ಏರೋಸ್ಪೇಸ್​, ಮಿಸ್ಟರಿಸ್​ ಆಫ್​ ಓಶಿಯನ್​, ಫನ್​ ಸೈನ್ಸ್​ ಹಾಗೂ ಔಟ್​ಡೋರ್​ ಗ್ಯಾಲರಿಗಳು ಪ್ರಮುಖ ಆಕರ್ಷಣೆಯಾಗಿರಲಿವೆ. 2 ವರ್ಷದ ಹಿಂದೆ ಯೋಜನೆ ಮಂಜೂರಾಗಿದ್ದು, ಭೂಮಿ ಹಸ್ತಾಂತರ ಕಾರ್ಯ ವಿಳಂಬದಿಂದ ಕಾಮಗಾರಿ ತಡವಾಗಿದೆ. ಈ ಕೇಂದ್ರವನ್ನು ಮುಂದಿನ 5 ತಿಂಗಳೊಳಗೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ಹೇಳಿದರು.

ಕೆರೆ ತುಂಬಿಸುವ ಯೋಜನೆಗಳಿಗೆ ಒತ್ತು

ರಾಜ್ಯಾದ್ಯಂತ ಅಂತರ್ಜಲ ಮಟ್ಟ ಹೆಚ್ಚಿಸುವ ಸಲುವಾಗಿ 427 ಏತ ನೀರಾವರಿ ಯೋಜನೆಗಳ ಮೂಲಕ ಕೆರೆಗಳನ್ನು ತುಂಬಿಸಲಾಗುತ್ತಿದೆ. ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ 1,000ದಿಂದ -1,500 ಅಡಿಗೆ ಕುಸಿದಿರುವ ಅಂತರ್ಜಲ ಮಟ್ಟವನ್ನು 250 ಅಡಿಗೆ ತರುವ ಗುರಿ ಹೊಂದಲಾಗಿದೆ. ಕೆ.ಸಿ. ವ್ಯಾಲಿ, ಹೆಚ್​.ಎನ್​. ವ್ಯಾಲಿ, ವೃಷಭಾವತಿ ವ್ಯಾಲಿ ಯೋಜನೆಗಳಿಂದ 700 ಕೆರೆಗಳನ್ನು ತುಂಬಿಸಿ 6 ಜಿಲ್ಲೆಗಳ ರೈತರಿಗೆ ಅನುಕೂಲ ಕಲ್ಪಿಸಲಾಗುವುದು. ಈ ಯೋಜನೆಗಳಿಗೆ ಬೆಂಗಳೂರಿನ ಸಂಸ್ಕರಿಸಿದ ನೀರನ್ನು ಬಳಸಲಾಗುತ್ತಿದೆ ಎಂದು ತಿಳಿಸಿದರು.

ಅಂತರ್ಜಲ ನಿಯಂತ್ರಣಕ್ಕೆ ಕಾಯ್ದೆ

ಕರ್ನಾಟಕದಲ್ಲಿ ಸುಮಾರು 37 ಲಕ್ಷ ಅಧಿಕೃತ ಕೊಳವೆಬಾವಿಗಳಿದ್ದು, ಅಂತರ್ಜಲ ಅತಿಯಾಗಿ ಕುಸಿಯುತ್ತಿರುವ ‘ಕ್ರಿಟಿಕಲ್​’ ವಲಯಗಳಲ್ಲಿ ನಿಯಂತ್ರಣ ತರಲು ಹೊಸ ಕಾಯ್ದೆ ಜಾರಿಗೆ ತರಲಾಗಿದೆ. ಖಾಸಗಿ ಕೊಳವೆಬಾವಿ ಕೊರೆಯಲು ಪಂಚಾಯಿತಿ ಅನುಮತಿ ಕಡ್ಡಾಯಗೊಳಿಸಲಾಗಿದೆ. ವಾಣಿಜ್ಯ ಉದ್ದೇಶದ ನೀರು ಮಾರಾಟದ ಮೇಲೆ ದರ ನಿಗದಿಪಡಿಸಲಾಗುವುದು. ರಾಜ್ಯದ 3,000 ಸ್ಥಳಗಳಲ್ಲಿ ಟೆಲಿಮೀಟರ್​ಗಳ ಮೂಲಕ ಅಂತರ್ಜಲ ಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಚೆಕ್​ ಡ್ಯಾಂಗಳು ಮತ್ತು ಕಿಂಡಿ ಅಣೆಕಟ್ಟುಗಳ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಉಡುಪಿ, ಮಂಗಳೂರು, ಕೊಡಗು, ಕಾರವಾರ ಜಿಲ್ಲೆಗಳಲ್ಲಿ ಮಳೆಯಿಂದಾಗುವ ಭೂಕುಸಿತ ತಡೆಯಲು ತಡೆಗೋಡೆ ನಿಮಾರ್ಣಕ್ಕೆ ಆದ್ಯತೆ ನೀಡಲಾಗುವುದು ಎಂದರು.

ಕಾರ್ಕಳದ ಎಣ್ಣೆಹೊಳೆ ಏತ ನೀರಾವರಿ ಯೋಜನೆ 14 ತಿಂಗಳು ವಿಳಂಬವಾಗಿದ್ದು, ಕೇವಲ 700 ಹೆಕ್ಟೇರ್​ಗೆ ಅನುಕೂಲವಾಗುತ್ತಿದೆ. ಬೆಣ್ಣೆಕುದ್ರು ಪ್ರದೇಶದಲ್ಲೂ ಉಪು$್ಪ ನೀರು ತಡೆ ಡ್ಯಾಂ ನಿರ್ಮಾಣದ ಬಗ್ಗೆಯೂ ರೈತರಿಂದ ದೂರುಗಳು ಬಂದಿದೆ. ಈ ಬಗ್ಗೆ ಪರಿಶೀಲಿಸಿ ವರದಿ ನೀಡಲು ಮುಖ್ಯ ಇಂಜಿನಿಯರ್​ ನೇತೃತ್ವದ ತಂಡಕ್ಕೆ ಸೂಚನೆ ನೀಡಲಾಗಿದ್ದು, ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಿರ್ದೇಶಕ ಸದಾಶಿವ ಪ್ರಭು, ಡಯಟ್​ ಪ್ರಾಂಶುಪಾಲ ಅಶೋಕ್​ ಕಾಮತ್​, ನಿರ್ಮಿತಿ ಕೇಂದ್ರದ ನಿರ್ದೇಶಕ ಅರುಣ್​ ಕುಮಾರ್​ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here