ಉಡುಪಿ ನಗರದ ಸಾರ್ವಜನಿಕರಿಗೆ ಗ್ಯಾಸ್ ಸಂಪರ್ಕ ಒದಗಿಸಬೇಕು : ಸಂಸದ ಕೋಟಾ ಸೂಚನೆ..!

0
74

ಉಡುಪಿ: ಮನೆ ಮನೆಗೆ ಪೈಪ್ ಲೈನ್ ಮೂಲಕ ಪಿ. ಎನ್. ಜಿ ಗ್ಯಾಸ್ ಸಂಪರ್ಕ ನೀಡುವ ಪೈಪ್ ಲೈನ್ ಕಾಮಗಾರಿಯನ್ನು ಶೀಘ್ರವಾಗಿ ಮುಕ್ತಾಯಗೊಳಿಸುವುದರೊಂದಿಗೆ ಉಡುಪಿ ನಗರದ ಸಾರ್ವಜನಿಕರಿಗೆ ಗ್ಯಾಸ್ ಸಂಪರ್ಕ ಒದಗಿಸಬೇಕು ಎಂದು ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.

ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮನೆ ಮನೆಗೂ ಪೈಪ್‌ ಲೈನ್‌ ಮೂಲಕ ಗ್ಯಾಸ್‌ ಸಂಪರ್ಕ ಹಾಗೂ ಮೋಟಾರು ವಾಹನಗಳಿಗೆ ಸಿಎನ್‌ .ಜಿ ವಿತರಣೆಗೆ ಸಂಬಂಧಿಸಿದಂತೆ ನಡೆದ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಮನೆ ಮನೆಗೆ ಎಲ್.ಪಿ.ಜಿ ಗ್ಯಾಸ್ ಸಂಪರ್ಕ ನೀಡುವ ಕಾಮಗಾರಿಯನ್ನು ಕಳೆದ 10 ವರ್ಷಗಳಿಂದ ಕೈಗೊಳ್ಳಲಾಗುತ್ತಿದ್ದು, ಇದುವರೆಗೆ ಕಾಮಗಾರಿ ಪೂರ್ಣಗೊಂಡಿಲ್ಲ. ಮುಂದಿನ ಜೂನ್ ಮಾಹೆ ಒಳಗಾಗಿ ಪೈಪ್‌ಲೈನ್ ಕಾಮಗಾರಿ ಮುಗಿಸುವುದರೊಂದಿಗೆ ಸಾರ್ವಜನಿಕರಿಗೆ ಗ್ಯಾಸ್ ಸಂಪರ್ಕ ಒದಗಿಸಲು ಮುಂದಾಗಬೇಕು ಎಂದರು.

ಮನೆ ಮನೆಗೆ ಪೈಪ್‌ ಲೈನ್‌ ಮೂಲಕ PNG ಗ್ಯಾಸ್‌ ಸಂಪರ್ಕ ಪಡೆಯಲು ಆಸಕ್ತರಿರುವ ಸಾರ್ವಜನಿಕರಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಕುರಿತ ಮಾಹಿತಿಯನ್ನು ಬ್ಯಾನರ್‌, ಕರಪತ್ರ ಹಾಗೂ ಸೋಷಿಯಲ್‌ ಮೀಡಿಯಾ ಮೂಲಕ ಪ್ರಚುರ ಪಡಿಸುವಂತೆ ಅನಿಲ ಕಂಪೆನಿ ಪ್ರತಿನಿಧಿಗಳಿಗೆ ತಿಳಿಸಿದ ಅವರು, ಜಿಲ್ಲೆಯ ನಗರ ಸಭಾ ವ್ಯಾಪ್ತಿಯಲ್ಲಿ ಅಂದಾಜು 35000 ಮನೆಗಳಿಗೆ ಅನಿಲ ಸರಬರಾಜು ಆಗಬೇಕಾಗಿದ್ದು ಪ್ರಸ್ತುತ 1500 ಮನೆಗಳಿಗೆ ಪೈಪ್‌ ಲೈನ್‌ ಸಿದ್ದವಾಗಿರುವುದಾಗಿ ಸಭೆಗೆ ಮಾಹಿತಿ ನೀಡಿದರು.

ಜಿಲ್ಲೆಯ ರಿಕ್ಷಾ ಚಾಲಕರು ತಮ್ಮ ಆಟೋಗಳಿಗೆ ಸಿ.ಎನ್‌ ಜಿ ಅನಿಲ ಹಾಕಿಸಲು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುತ್ತಿರುವುದು ಕಂಡು ಬರುತ್ತಿದೆ. ಜಿಲ್ಲೆಗೆ ಹೆಚ್ಚುವರಿಯಾಗಿ ಸಿ.ಎನ್‌.ಜಿ ಗ್ಯಾಸ್‌ ಸಾಗಾಣಿಕೆ ಮಾಡಲು 4 ಜಂಬೋ ವಾಹನವನ್ನು ಒದಗಿಸಿದ್ದಲ್ಲಿ ಸಮಸ್ಯೆ ನಿವಾರಣೆ ಯಾಗಲಿದೆ. ಈ ಬಗ್ಗೆ ಕ್ರಮವಹಿಸುವಂತೆ ಅನಿಲ ಕಂಪನಿ ಗಳಿಗೆ ತಿಳಿಸಿದರು.

ಪಣಂಬೂರಿನ ಎ ಟಿ ಜಿ ಎಲ್ ಟರ್ಮಿನಲ್ ವರೆಗೆ ಪೈಪ್‌ಲೈನ್ ಅಳವಡಿಸುವ ಕೆಲಸ ಈ ತಿಂಗಳ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದ್ದು, ನಂತರ, ಲೈನ್ ಚಾರ್ಜ್ ಮಾಡಲು ಅನುಮೋದನೆಗಾಗಿ PESSO ಗೆ ಅರ್ಜಿಯನ್ನು ಸಲ್ಲಿಸಲಾಗುತ್ತದೆ. PESSO ಅನುಮತಿ ಪಡೆದ ನಂತರ, ಎ ಟಿ ಜಿ ಎಲ್ ಸಿದ್ಧತೆಗೆ ಒಳಪಟ್ಟು ಅನಿಲವನ್ನು ವಿಧಿಸಲಾಗುತ್ತದೆ ಮತ್ತು ಪೂರೈಕೆಯನ್ನು ಪ್ರಾರಂಭಿಸಬಹುದು ಎಂದು ಸಭೆಗೆ ಗೇಲ್ ಸಂಸ್ಥೆಯವರು ತಿಳಿಸಿದರು.

ಜಿಲ್ಲೆಯಲ್ಲಿ ಪ್ರಸ್ತುತ 11 ಸಿ ಎನ್‌ ಜಿ ವಿತರಣಾ ಘಟಕವಿದ್ದು ಹೊಸದಾಗಿ ಮುನಿಯಾಲು, ಎರ್ಮಾಳು ಪ್ರದೇಶದಲ್ಲಿ ಹೊಸ ಸಿ ಎನ್‌ ಜಿ ವಿತರಣಾ ಘಟಕ ಮಂಜೂರು ಮಾಡಲು ಪತ್ರ ಬರೆದಿರುವುದಾಗಿದೆ ಸಂಸದರು ತಿಳಿಸಿದರು.

ಪ್ರಸ್ತುತ ಸಮಾರಂಭಗಳು ಹೆಚ್ಚಾಗಿರುವ ಹಿನ್ನೆಲೆ, ಬೇಡಿಕೆಗೆ ಅನುಗುಣವಾಗಿ ಸಿಎನ್‌ ಜಿ ಗ್ಯಾಸ್‌ ಪೂರೈಕೆಗೆ ಈಗಿರುವ 17 ಟ್ರಕ್ ಗಿಂತ ಹೆಚ್ಚು ವಾಹನ ನೀಡಬೇಕೆಂದು ಸಿಎನ್‌ ಜಿ ಗ್ಯಾಸ್‌ ವಿತರಕರು ಸಭೆಯ ಗಮನಕ್ಕೆ ತಂದರು, ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು ಅದಾನಿ ಮತ್ತು ಗೇಲ್‌ ಕಂಪನೆಯವರು ಹೊಂದಾಣಿಕೆಯಿಂದ ಕೆಲಸ ನಿರ್ವಹಿಸುವಂತೆ, ಜಿಲ್ಲೆಗೆ 10 ಹೆಚ್ಚುವರಿ ಲೋಡ್‌ ಗಳ ಸಿ. ಎನ್. ಜಿ ಒದಗಿಸಲು ಕ್ರಮ ವಹಿಸುವಂತೆ ಹಾಗೂ ಇಂಧನವನ್ನು ಲೋಡ್‌ ಮಾಡುವಾಗ FIFO ನಿಯಮವನ್ನು ಪಾಲಿಸುವಂತೆ ಸೂಚಿಸಿದರು.

ಎನ್‌ ಜಿ ಗ್ಯಾಸ್‌ ವಿತರಕರು ಮೆಸ್ಕಾಂ ಬಿಲ್‌ ಗಳನ್ನು ಮರುಪಾವತಿಸಲು ಅದಾನಿ ಕಂಪೆನಿಯವರು 3 ರಿಂದ 4 ತಿಂಗಳು ವಿಳಂಬ ಮಾಡುತ್ತಿದ್ದಾರೆಂದು ದೂರು ಬಂದಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲು ಅನಿಲ ಕಂಪೆನಿಯವರಿಗೆ ಸಂಸದರು ಸೂಚಿಸಿದರು.

ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಮಾತನಾಡಿ, ಅನಿಲ ಘಟಕದಲ್ಲಿ ಯಾವುದಾದರೂ ಸಮಸ್ಯೆ ಉಧ್ವವಿಸಿದಾಗ ಪರಿಹರಿಸಲು ಟೆಕ್ನಿಷಿಯನ್‌ ಕೊರತೆಯಿದ್ದು, ಹೆಚ್ಚುವರಿಯಾಗಿ ಸಿ.ಎನ್. ಜಿ ಆಪರೇಟರ್ ಗಳನ್ನು ನೇಮಕ ಮಾಡಿಕೊಂಡಿರಬೇಕೆಂದು ಅನಿಲ ಕಂಪೆನಿಯ ಪ್ರತಿನಿಧಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ರವೀಂದ್ರ, ಅದಾನಿ ಹಾಗೂ ಗೇಲ್‌ ಕಂಪೆನಿ ಪಧಾಧಿಕಾರಿಗಳು ಮತು ಸಿಎನ್‌.ಜಿ ವಿತರಣಾ ಬಂಕ್‌ ಮಾಲಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
.

LEAVE A REPLY

Please enter your comment!
Please enter your name here