ಉಡುಪಿ: ಗೌಡ ಸಾರಸ್ವತ ಬ್ರಾಹ್ಮಣ ಯುವಕ ಮಂಡಳಿ ; ‘ಉತ್ಕರ್ಷ’ ಏಳು ದಿನಗಳ ಬೇಸಿಗೆ ಶಿಬಿರ ಸಂಪನ್ನ

0
15

ಉಡುಪಿ: ಗೌಡ ಸಾರಸ್ವತ ಬ್ರಾಹ್ಮಣ ಯುವಕ ಮಂಡಳಿ ಹಾಗೂ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ  ಉಡುಪಿ  ಇದರ  ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ‘ಉತ್ಕರ್ಷ’ ಏಳು ದಿನಗಳ ಬೇಸಿಗೆ ಶಿಬಿರವು ಮೇ 4 ರಿಂದ 10 ವರೆಗೆ  ಜರಗಿತು ,  ಮುಖ್ಯ ಅತಿಥಿ  ಸಂಸ್ಕೃತಿ  ವಿಶ್ವ ಪ್ರತಿಷ್ಠಾನ ಗೌರವಾಧ್ಯಕ್ಷರಾದ   ವಿಶ್ವನಾಥ ಶೆಣೈ ದಂಪತಿಗಳು ದೀಪ ಬೆಳಗಿಸಿ  , ಮಕ್ಕಳ ನೀತಿ ಬೋಧನೆ ಪುಸ್ತಕ ಬಿಡುಗಡೆ ಗೊಳಿಸಿ  ಬೇಸಿಗೆ ಶಿಬಿರ  ಉದ್ಘಾಟಿಸಿ  ಇಂತಹ ಶಿಬಿರಗಳು ಇಂದಿನ ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಮೌಲ್ಯಗಳು ಹಾಗೂ ಜೀವನ ಕೌಶಲ್ಯಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಶುಭ ಹಾರೈಸಿದರು 

ಒಂದು ವಾರಗಳ ಕಾಲ ನಡೆದ ಈ ವಿಶೇಷ ಶಿಬಿರದಲ್ಲಿ ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗುವ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಭಜನೆ, ಶ್ಲೋಕ ಪಠಣ, ಯೋಗಾಭ್ಯಾಸ, ಕಥಾ ವಾಚನ, ವ್ಯಕ್ತಿತ್ವ ವಿಕಾಸ ತರಬೇತಿ, ಸಾಂಸ್ಕೃತಿಕ ಸ್ಪರ್ಧೆಗಳು ಹಾಗೂ ಸೃಜನಾತ್ಮಕ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಶಿಸ್ತು, ಆತ್ಮವಿಶ್ವಾಸ, ನಾಯಕತ್ವ ಗುಣ ಮತ್ತು ತಂಡಭಾವನೆ ಬೆಳೆಸುವ ಪ್ರಯತ್ನ ಮಾಡಲಾಯಿತು.

ಬೌದ್ಧಿಕ ಬೆಳವಣಿಗೆಯ ಜೊತೆಗೆ ಮಕ್ಕಳ ದೈಹಿಕ ಕ್ಷಮತೆ ಮತ್ತು ಚುರುಕುತನವನ್ನು ವೃದ್ಧಿಸುವ ಉದ್ದೇಶದಿಂದ ವಿವಿಧ ದೇಶಿ ಆಟಗಳ ಪರಿಚಯ ಮತ್ತು ತರಬೇತಿಯನ್ನು ಕೂಡ ನೀಡಲಾಯಿತು. ಸಂಪ್ರದಾಯಬದ್ಧ ಆಟಗಳ ಮೂಲಕ ಮಕ್ಕಳಲ್ಲಿ ಸಹಕಾರ ಮನೋಭಾವ, ಕ್ರೀಡಾಸ್ಫೂರ್ತಿ ಹಾಗೂ ಆರೋಗ್ಯಕರ ಜೀವನಶೈಲಿಯ ಅರಿವು ಮೂಡಿಸಲಾಯಿತು.

ಶಿಬಿರದ ಪ್ರಮುಖ ಆಕರ್ಷಣೆಯಾಗಿ ಮಾತೃಪೂಜನ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯಿತು. ತಾಯಿಯ ಮಹತ್ವವನ್ನು ಮಕ್ಕಳಿಗೆ ಮನವರಿಕೆ ಮಾಡುವ ಈ ಕಾರ್ಯಕ್ರಮ ಎಲ್ಲರ ಮನಸೂರೆಗೊಂಡಿತು. ಅಲ್ಲದೆ ಶಿಬಿರಾರ್ಥಿಗಳ ಸಮೂಹಿಕ ಹುಟ್ಟುಹಬ್ಬ ಆಚರಣೆ ಸಂಭ್ರಮದಿಂದ ನೆರವೇರಿತು. ಮಕ್ಕಳಲ್ಲಿ ಒಗ್ಗಟ್ಟು ಮತ್ತು ಸಂತಸದ ವಾತಾವರಣ ನಿರ್ಮಾಣವಾಗುವಂತೆ ಕಾರ್ಯಕ್ರಮವನ್ನು ವಿನೂತನವಾಗಿ ಆಯೋಜಿಸಲಾಗಿತ್ತು.

ಇನ್ನೊಂದು ವಿಶೇಷ ಆಕರ್ಷಣೆಯಾಗಿ ಪುರಾಣ ಮತ್ತು ಇತಿಹಾಸ ಪ್ರಸಿದ್ಧ ವ್ಯಕ್ತಿಗಳ ವೇಷಭೂಷಣ ಧರಿಸಿ ಮಕ್ಕಳು ರ್ಯಾಂಪ್‌ವಾಕ್ ನಡೆಸಿದರು. ರಾಮಾಯಣ, ಮಹಾಭಾರತ ಹಾಗೂ ಭಾರತೀಯ ಇತಿಹಾಸದ ವಿವಿಧ ಪಾತ್ರಗಳ ವೇಷದಲ್ಲಿ ಮಕ್ಕಳು ಗಮನಸೆಳೆದರು. ಈ ಕಾರ್ಯಕ್ರಮವು ಮಕ್ಕಳಲ್ಲಿ ನಮ್ಮ ಪಾರಂಪರಿಕ ಸಂಸ್ಕೃತಿ ಮತ್ತು ಇತಿಹಾಸದ ಅರಿವು ಮೂಡಿಸುವಲ್ಲಿ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು.

LEAVE A REPLY

Please enter your comment!
Please enter your name here