ಮೂಡುಬಿದಿರೆ: ಬಿರುಗಾಳಿಯ ಅಬ್ಬರಕ್ಕೆ ಶಿರ್ತಾಡಿ ಗ್ರಾಮದ ಶಿಮುಂಜೆಬೈಲು ಪ್ರದೇಶದಲ್ಲಿರುವ ಸದಾನಂದ ಅವರ ಮನೆ ತೀವ್ರ ಹಾನಿಗೊಳಗಾಗಿದೆ. ಗಾಳಿಯ ರಭಸಕ್ಕೆ ಮನೆಯ ಮೇಲ್ಛಾವಣಿಯ ಶೀಟುಗಳು ಕಿತ್ತುಹಾರಿ, ಮನೆಯೊಳಗೆ ಮಳೆನೀರು ನುಗ್ಗಿ ವಾಸಿಸಲು ಅಸಾಧ್ಯವಾಗುವಂತಾಗಿದೆ.
ಭಾನುವಾರ ಘಟನೆ ಸಂಭವಿಸುವ ಕೆಲವೇ ಕ್ಷಣಗಳ ಮೊದಲು ಸದಾನಂದ ಅವರ ಪತ್ನಿ ಮತ್ತು ನಾಲ್ವರು ಮಕ್ಕಳು ಪಕ್ಕದ ಮನೆಗೆ ತೆರಳಿದ್ದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ. ಇಲ್ಲದಿದ್ದರೆ ಜೀವಹಾನಿ ಸಂಭವಿಸುವ ಸಾಧ್ಯತೆಯೂ ಇತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಶಿರ್ತಾಡಿ ಗ್ರಾಮ ಪಂಚಾಯಿತಿ ಸದಸ್ಯ ಪ್ರವೀಣ್ ಕುಮಾರ್ ಹಾಗೂ ಗ್ರಾಮ ಲೆಕ್ಕಿಗ ನಿಶ್ಮಿತಾ ಸ್ಥಳಕ್ಕೆ ಭೇಟಿ ನೀಡಿ ಹಾನಿಯ ಪರಿಶೀಲನೆ ನಡೆಸಿದರು.

