ಆರ್ಟ್‌ ಆಫ್‌ ಗಿವಿಂಗ್‌ 13 ನೇ ವಾರ್ಷಿಕೋತ್ಸವ : ಶೇರ್‌ ಟು ಶೈನ್‌ ಘೋಷವಾಕ್ಯದಡಿ ಕಾರ್ಯಕ್ರಮ

0
6

ದಾನದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ: ಕೃಷ್ಣ ಎಸ್. ದೀಕ್ಷಿತ್ “

ಬೆಂಗಳೂರು : ದಾನದಿಂದ ಮಾತ್ರವೇ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಎಲ್ಲವೂ ನನಗೇ ಬೇಕು ಎಂಬ ಭಾವನೆಯಿಂದ ಉತ್ತಮ ಸಮಾಜ ಕಟ್ಟಲು ಸಾಧ್ಯವಿಲ್ಲ. ವಿದ್ಯೆ, ಅನ್ನ, ವಸ್ತ್ರ ದಾನದಿಂದ ಸಮಾಜವನ್ನು ಸದೃಢವಾಗಿ ಮಾಡಬಹುದು ಎಂದು ಒಡಿಶಾ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಅವರು ಹೇಳಿದರು.

ನಗರದ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಆರ್ಟ್‌ ಆಫ್‌ ಗಿವಿಂಗ್‌ನ 13 ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಯಾವ ಜೀವಿಗಳು ಕೊಡುಗೈ ಆಗಿ, ಇನ್ನೊಬ್ಬರ ಜೊತೆ ಹಂಚಿಕೊಂಡು ಹೋಗುತ್ತಾರೋ ಅವು ಹೆಚ್ಚು ಕಾಲ ಬದುಕುತ್ತವೇ. ನಾನು ಕೊಟ್ಟೇ ಎಂಬ ಭಾವವೂ ನಮ್ಮಲ್ಲಿ ಉಳಿಯಬಾರದು. ಅದು ಗಿವಿಂಗ್‌. ಆರ್ಟ್‌ ಆಫ್‌ ಗಿವಿಂಗ್‌ ಆರ್ಟ್‌ ಆಫ್‌ ಲವಿಂಗ್‌ಗಿಂತ ಭಿನ್ನವಾಗಿದೆ ಎಂದರು.

ವಿಶ್ವದ ನಾಗರಿಕತೆಗಳು ನಶಿಸಿ ಹೋಗಿದ್ದೇ ಆಂತರಿಕ ಶಕ್ತಿಯನ್ನೇ ಕಳೆದುಕೊಂಡಿದ್ದರಿಂದ. ಯುದ್ಧದಿಂದ, ಪ್ರಾಕೃತಿಕ ವಿಕೋಪಗಳಿಂದ, ಸಾಂಕ್ರಾಮಿಕ ಕಾಯಿಲೆಗಳಿಂದ ಅಲ್ಲ. ಜೀವನವನ್ನು ಭೋಗ ಮಾಡಿಕೊಳ್ಳಬೇಕು ಎಂದು ಬಯಸಿದ್ದರಿಂದ ನಾಗರಿಕತೆಗಳು ಅಳಿದು ಹೋದವು. ಮನುಷ್ಯ ಮನುಷ್ಯನಾಗಿ ಬದುಕಬೇಕು. ಇಂದು ನಾವು ಶಿಕ್ಷಣ ಪಡೆದಿದ್ದೇವೆ. ಎಲ್ಲವನ್ನೂ ತಿಳಿದುಕೊಂಡಿದ್ದೇವೆ. ಆದರೆ ಪ್ರೀತಿಯ ಬಗ್ಗೆ ತಿಳಿದಿಲ್ಲ. ಇನ್ನೊಬ್ಬರನ್ನು ನನ್ನ ಭಾಗ ಎಂದು ತಿಳಿದುಕೊಂಡಾಗ ಪ್ರೀತಿ ಹುಟ್ಟುತ್ತದೆ ಎಂದು ಹೇಳಿದರು.

ಭಾರತೀಯ ಸಂಸ್ಕೃತಿ ಪಾಶ್ಚಿಮಾತ್ಯ ಸಂಸ್ಕೃತಿಗಿಂತ ಭಿನ್ನವಾಗಿದೆ. ನಮ್ಮದು ಭಾಗ ಭಾಗ ಮಾಡಿ ನೋಡುವ ಸಂಸ್ಕೃತಿ ಅಲ್ಲ. ದಾನದ ಸಂಸ್ಕೃತಿ ನಮ್ಮದು. ಯಾವ ಸಮಾಜ ಕೊಡು ಕೊಳ್ಳುವಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವುದೋ ಅದು ಅವಸಾನ ಆಗುವುದಿಲ್ಲ ಎಂದರು.

ತ್ರಿವಿಧ ದಾಸೋಹಿಗಳಾಗಿದ್ದ ಸಿದ್ಧಗಂಗಾ ಮಠದ ಡಾ.ಶಿವಕುಮಾರ್‌ ಸ್ವಾಮೀಜಿ ಅವರು ಕಾಳುಕಡ್ಡಿಗಳನ್ನು ಸಂಗ್ರಹಿಸಿ ಬೇಡಿ ತಂದು ಮಕ್ಕಳಿಗೆ ನೀಡಿದರು. ಅವರಿಗೆ ಜ್ಞಾನ, ಆಶ್ರಯ ನೀಡಿದರು. ಅದೇ ರೀತಿ ಅಚ್ಯುತ ಸಮಂತ ಅವರು ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡಿದರು. ತಮ್ಮಲ್ಲಿದ್ದುದನ್ನು ಬೇರೆಯವರಿಗೆ ನೀಡಿ ಖುಷಿಪಟ್ಟರು. ನಮ್ಮಲ್ಲಿನ ವಿದ್ಯೆಯನ್ನು ಇನ್ನೊಬ್ಬರ ಜೊತೆ ಹಂಚಿಕೊಂಡರೆ ಅದು ಕಡಿಮೆ ಆಗುವುದಿಲ್ಲ, ಬದಲಿಗೆ ಹೆಚ್ಚುತ್ತದೆ ಎಂದು ವಿವರಿಸಿದರು.

ಅನುಭವ ಮಂಟಪಗಳು ಅನುಭಾವ ಮಂಟಪಗಳಾಗಿ ಹೊರಹೊಮ್ಮಿದ್ದವು. ಅಲ್ಲಿ ಯಾವ್ಯವುದೋ ಜಾತಿಯವರು ಯಾವುದೋ ಪದಾರ್ಥ ತಂದು ಅಡುಗೆ ಮಾಡಿ ಹಂಚಿ ತಿಂದು ಪ್ರೀತಿಯಿಂದ ಇರುತ್ತಿದ್ದರು. ಸಂಘ ಜೀವನದಿಂದ ಇಂದು ಒಂಟಿ ಜೀವನದತ್ತ ನಾವು ಸಾಗುತ್ತಿದ್ದೇವೆ. ಎಲ್ಲವೂ ನನಗೆ ಬೇಕು ಎಂಬು ದುರಾಸೆ ನಮ್ಮದು. ನಾವು ಹಂಚಿಕೊಂಡು ಜೀವನ ಸಾಗಿಸಬೇಕು. ತ್ಯಾಗದಿಂದ ಪ್ರೀತಿ ಹುಟ್ಟುತ್ತದೆ. ಇಡೀ ನಮ್ಮ ನಾಗರಿಕತೆಯ ಗುಣಲಕ್ಷಣವೇ ಎಲ್ಲರ ಜೊತೆಗೆ ಬದುಕೋಣ ಎಂಬುದು. ಜೊತೆಗೆ ಹೆಜ್ಜೆ ಹಾಕೋಣ, ಜೊತೆಗೆ ನಡೆಯೋಣ ಎಂಬುದು. ನಮ್ಮಲ್ಲಿರುವುದನ್ನು ಬೇರೆಯವರಿಗೆ ಕೊಟ್ಟಾಗ, ಹಂಚಿಕೊಂಡಾಗ ನಮ್ಮ ಖುಷಿಯೂ ಜಾಸ್ತಿಯಾಗುತ್ತದೆ. ಇದನ್ನು ವಿಜ್ಞಾನವೇ ಸಾಬೀತು ಮಾಡಿದೆ ಎಂದು ಹೇಳಿದರು.

ಸಭೆ ಮತ್ತು ಸಮಾರಂಭಗಳಲ್ಲಿ ನಾವು ಸಾಕಷ್ಟು ಆಹಾರ ವ್ಯರ್ಥ ಮಾಡುತ್ತೇವೆ. ಇದರಿಂದ ಬೇರೆಯವರಿಗೆ ಸಿಗಬೇಕಾದ ಸಿಗುವುದಿಲ್ಲ. ಆದ್ದರಿಂದ ಎಷ್ಟು ಬೇಕೋ ಅಷ್ಟು ಬಡಿಸಿಕೊಂಡು ಉಳಿದದ್ದನ್ನು ಬೇರೆಯವರಿಗೆ ನೀಡಿದರೆ ಅವರ ಖುಷಿ ಹೆಚ್ಚುತ್ತದೆ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಡಾ. ವೆಂಕಟೇಶ್ ಅವರು ಮಾತನಾಡಿ, ಸಮಾಜದಲ್ಲಿ ಪರೋಪಕಾರ, ಪ್ರೀತಿ, ಕರುಣೆ, ದಯೆ ಎನ್ನುವುದು ಈಗೀಗ ಕಡಿಮೆಯಾಗಿದೆ. ಯಾರು ಜಾಸ್ತಿ ಆಸ್ತಿ ಮಾಡಿರುತ್ತಾರೆ, ಅಧಿಕಾರ ಹೊಂದಿರುತ್ತಾರೆ ಅಂತಹವರಿಗೆ ಮನ್ನಣೆ ಸಿಗುವ ಸ್ಥಿತಿ ಇದೆ. ಸಮಾಜಕ್ಕೆ ಒಳ್ಳೆಯದು ಮಾಡಬೇಕೆಂಬ ಆಲೋಚನೆಯಿಂದ ಅಚ್ಯುತ ಸಮಂತ ಅವರು ಈ ಆರ್ಟ್‌ ಆಫ್‌ ಗಿವಿಂಗ್‌ ಅನ್ನು ಆರಂಭ ಮಾಡಿದರು. ಪ್ರತಿಯೊಬ್ಬ ವ್ಯಕ್ತಿಯೂ ಸಮಾಜಕ್ಕೆ ತನ್ನದಾದ ಸಣ್ಣ ಕೊಡುಗೆ ನೀಡಿದರೆ ಸಮಾಜದಲ್ಲಿ ಅರ್ಥಪೂರ್ಣವಾದ ಬದಲಾವಣೆ ಸಾಧ್ಯವಿದೆ ಎಂದರು.

ಗುಹೆಯಲ್ಲಿ ವಾಸ ಮಾಡುತ್ತಿದ್ದ ಮಾನವ ಇಂದು ಚಂದ್ರನ ಮೇಲೆ ಪ್ರಯಾಣ ಮಾಡಿದ್ದಾನೆ. ಆದರೆ ಮೂಲಭೂತವಾಗಿ ಬೇಕಾದ ವಿಷಯಗಳನ್ನು ಮರೆಯುತ್ತಿದ್ದಾನೆ. ಮನುಷ್ಯ ಮನುಷ್ಯರ ನಡುವೆ ಕಂದಕ ನಿರ್ಮಾಣವಾಗಿದೆ. ಎಲ್ಲರೂ ಚೌಕಟ್ಟಿನಲ್ಲಿ ವಾಸಿಸುತ್ತಿದ್ದಾರೆ. ನಾವು ಏನನ್ನೂ ನೀಡಿದರೂ ಮತ್ತೆ ನಮಗೆ ಸಿಗುತ್ತದೆ. ಆದಷ್ಟು ಒಳ್ಳೆಯದನ್ನೇ ಮಾಡಲು ಪ್ರಯತ್ನ ಮಾಡಬೇಕು ಎಂದರು.

ಚಿತ್ರ ನಿರ್ಮಾಪಕರು ಹಾಗೂ ನಿರ್ದೇಶಕರಾದ ಪಿ ಶೇಷಾದ್ರಿ ಅವರು ಮಾತನಾಡಿ, ಮನುಷ್ಯರು ಸಾಮಾನ್ಯವಾಗಿ ಸಾರ್ಥಿಗಳು. ಸ್ವಾರ್ಥ ಇಲ್ಲದೇ ಇದ್ದರೆ ಬದುಕಲು ಸಾಧ್ಯವಿಲ್ಲ. ಆದರೆ ಅಚ್ಯುತ ಸಮಂತ ಅವರು ನಿಸ್ವಾರ್ಥಿಗಳು. ಮಾನವೀಯತೆ ವ್ಯಕ್ತಿಯನ್ನು ರೂಪಿಸುತ್ತದೆ. ತಮ್ಮಲ್ಲಿರುವುದನ್ನು ಇತರರಿಗೆ ಕೊಟ್ಟು ಅವರ ಏಳ್ಗೆಯಲ್ಲೇ ಖುಷಿ ಕಂಡವರು ಸಮಂತ ಅವರು. ನಮ್ಮ ಸಮಾಜಕ್ಕೆ ಸಮಂತ ಅವರಂತಹ ವ್ಯಕ್ತಿಗಳ ಅಗತ್ಯವಿದೆ ಎಂದು ಹೇಳಿದರು.

ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷರಾದ ಡಾ. ವೋಡೇ ಪಿ. ಕೃಷ್ಣ ಅವರು ಮಾತನಾಡಿ, ಯಾರಿಂದಲೂ ಏನನ್ನೂ ಬಯಸದೇ ಮಹಾತ್ಮ ಗಾಂಧಿ ಅವರು ಬದುಕಿದ್ದರು. ಒಂದಲ್ಲ ಒಂದು ರೀತಿ ದೇಶಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು. ಆರ್ಟ್‌ ಆಫ್‌ ಗಿವಿಂಗ್‌ ದೀಪ ಬೆಳಗುವ ಕಾರ್ಯ. ಎಲ್ಲರ ಮನಸ್ಸಲ್ಲಿ ಕೊಡುವ ಭಾವವನ್ನು ಜಾಗೃತಗೊಳಿಸೋಣ ಎಂದರು.

ಜ್ಞಾನಕ್ಕಾಗಿ ಭಾರತ ಹೆಸರು ಮಾಡಿದೆ. ನಾವು ಜ್ಞಾನವನ್ನು ಸಂಪಾದಿಸಬೇಕು. ಜೊತೆಗೆ ಪ್ರೀತಿ ಹಂಚಬೇಕು. ಜ್ಞಾನ ಪಡೆದಾಗ ಮನುಷ್ಯ ವಿಕಸಿತನಾಗುತ್ತಾನೆ. ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಾನೆ. ಕೊಡುವ ಮನಸ್ಸು ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದರು.

ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷರಾದ ರಾಕೇಶ್ ಸಿಂಗ್‌ ಹಾಗೂ ಗಾಯಕಿ ಸವಿತಕ್ಕ ಅವರು ಮಾತನಾಡಿದರು. ಆರ್ಟ್ ಆಫ್ ಗಿವಿಂಗ್ ನ ಕರ್ನಾಟಕದ ಮುಖ್ಯಸ್ಥರಾದ ಗುರುಪ್ರಸಾದ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಸಮಾರಂಭದ ಅತಿಥಿಯಾಗಿದ್ದ ನಿವೃತ್ತ ಲೋಕಾಯುಕ್ತ ಎನ್ ಸಂತೋಷ್ ಹೆಗ್ಡೆ ಅವರು ಗೈರು ಹಾಜರಾಗಿದ್ದರಿಂದ ಅವರ ಸಂದೇಶ ಪ್ರಸಾರ ಮಾಡಲಾಯಿತು.

ಉದ್ಘಾಟನಾ ಸಮಾರಂಭಕ್ಕೂ ಮೊದಲು ಎಒಜಿ ಸಂಸ್ಥಾಪಕರಾದ ಅಚ್ಯುತ ಸಮಂತ ಅವರ ವಿಶೇಷ ವೀಡಿಯೊ ಸಂದೇಶ ಪ್ರಸಾರ ಮಾಡಲಾಯಿತು. ಅಂತರರಾಷ್ಟ್ರೀಯ ಖ್ಯಾತಿಯ ಜಾನಪದ ಗಾಯಕಿ ಸವಿತಕ್ಕ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

ಈ ಸಮಾರಂಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಜಂಟಿ ಕಾರ್ಯದರ್ಶಿಗಳಾದ ಜಯಲಕ್ಷ್ಮಿ, ಶಿಕ್ಷಣ, ವೃತ್ತಿ ಕೌಶಲ್ಯ ತರಬೇತಿ, ಉದ್ಯಮಶೀಲತೆಯ ಪರಿಣತರಾದ ಡಾ. ಎ. ಎಂ. ಸುರೇಶ್, ಕಾರ್ಪೊರೇಟ್ ವ್ಯವಹಾರ ಮತ್ತು ಬ್ರ್ಯಾಂಡಿಂಗ್ ತಂತ್ರಜ್ಞರು, ಸ್ಟಾರ್ಟ್ ಅಪ್ ಸಲಹೆಗಾರರಾದ ಪ್ರಣಬ್ ಕೆ ಪಣಿ, ಭರತನಾಟ್ಯ ಮತ್ತು ಶಿಕ್ಷಣದ ಮೂಲಕ ಯುವ ಪ್ರತಿಭೆಗಳ ಪ್ರೋತ್ಸಾಹಕಿ ಹೆಚ್. ವಿ. ಹೇಮಲತಾ, ಕಂಠದಾನ ಕಲಾವಿದ ಮಾರುತೇಶ್, ಗ್ರಾಮೀಣ ಪ್ರದೇಶದಲ್ಲಿ ದೇವಸ್ಥಾನ ಸಂಸ್ಕೃತಿಯ ಪೋಷಕ ರಾಘವೇಂದ್ರ ಟಿ ವಿ, ಸಿಂಗಿಂಗ್‌ ಬೌಲ್‌ ಥೆರಪಿ ಪರಿಣತರು ಮತ್ತು ಸೌಂಡ್‌ ಹೀಲಿಂಗ್‌ ಸಂಶೋಧಕ ಕೆ. ರಾಕೇಶ್, ಸೃಜನಶೀಲ ಮತ್ತು ವೃತ್ತಿಪರ ಕ್ಷೇತ್ರಗಳಲ್ಲಿ ಪರಿಣತೆ ಸೀಮಾ ಮುರಳೀಧರ್ ಹಾಗೂ ನಿವೃತ್ತ ಸರ್ವೆ ಸೂಪರ್‌ ವೈಜರ್‌ ಶಶಿಧರ್ ವೈ ಬಿ , PHD-13579 ಆಧ್ಯಾತ್ಮಿಕ ಸತ್ಸಂಗ ಕ್ರಿಯಾಯೋಗ ಕಾರ್ಯಕ್ರಮದ ರೂವಾರಿ ಎಚ್‌ ಸಿ ದೊಡ್ಡೇಗೌಡ, ಕರಕುಶಲ ಕಲೆಯಲ್ಲಿ ಪರಿಣತರಾದ ಮಮತಾ ಎನ್‌ ಸ್ವಾಮಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here