ಎಸ್‌.ಸಿ.ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂತ ರವಿದಾಸರ 650ನೇ ಜಯಂತಿ ಅಂಗವಾಗಿ “ಭಾರತೀಯ ಸಂತ ಪರಂಪರೆ” ಉಪನ್ಯಾಸಮಾಲೆ ಕಾರ್ಯಕ್ರಮ

0
19

ಮಂಗಳೂರು : ಎಸ್‌.ಸಿ.ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ, ಮಂಗಳೂರು ವಿಭಾಗ ಹಾಗೂ ಕಾಲೇಜಿನ ಹಿಂದಿ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಸಂತ ರವಿದಾಸರ 650ನೇ ಜಯಂತಿಯ ಅಂಗವಾಗಿ “ಭಾರತೀಯ ಸಂತ ಪರಂಪರೆ” ವಿಷಯದ ಉಪನ್ಯಾಸಮಾಲೆ – 2 ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು. ಕಾರ್ಯಕ್ರಮವು ಭಕ್ತಿ, ಮಾನವೀಯತೆ, ಸಮಾನತೆ ಹಾಗೂ ಮೌಲ್ಯಾಧಾರಿತ ಬದುಕಿನ ಸಂದೇಶವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವಲ್ಲಿ ಯಶಸ್ವಿಯಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಸಂತ ರವಿದಾಸರ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ಬಳಿಕ ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು. ಈ ಸಂದರ್ಭ ಸಭಾಂಗಣವು ಭಕ್ತಿಭಾವ ಹಾಗೂ ಸಾಂಸ್ಕೃತಿಕ ಮೌಲ್ಯಗಳಿಂದ ತುಂಬಿ ತುಳುಕಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಗೌರವಾನ್ವಿತ ಪ್ರಾಂಶುಪಾಲರಾದ ಹಾರ್ದಿಕ್ ಪಿ. ಚೌಹಾಣ್ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಕೇವಲ ಪಾಠ ಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ, ಶರಣರು ಮತ್ತು ಸಂತರು ಬೋಧಿಸಿದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕೆ ಸಹಕಾರಿ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಉದ್ಘಾಟನಾ ಭಾಷಣ ಮಾಡಿದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಅವರು ಸಂತ ರವಿದಾಸರ ಜೀವನ, ತತ್ವಗಳು ಹಾಗೂ ಸಮಾಜ ಪರಿವರ್ತನೆಯಲ್ಲಿ ಅವರ ಪಾತ್ರದ ಕುರಿತು ವಿಸ್ತಾರವಾಗಿ ಮಾತನಾಡಿದರು. ಜಾತಿ ಭೇದ, ಅಸಮಾನತೆ ಮತ್ತು ಅಹಂಕಾರದಿಂದ ಕೂಡಿದ ಕಾಲಘಟ್ಟದಲ್ಲಿಯೇ ಸಂತ ರವಿದಾಸರು ಮಾನವೀಯತೆ, ಸಮಾನತೆ ಮತ್ತು ಪ್ರೀತಿಯ ಸಂದೇಶವನ್ನು ಸಾರಿದ ಮಹಾನ್ ಸಂತರು ಎಂದು ಹೇಳಿದರು.

“ಮಾನವನನ್ನು ದೊಡ್ಡವನಾಗಿಸುವುದು ಅವನ ಜಾತಿಯಲ್ಲ, ಅವನ ಗುಣ ಹಾಗೂ ಪರಿಶ್ರಮ” ಎಂಬ ಸಂದೇಶವನ್ನು ರವಿದಾಸರು ತಮ್ಮ ಬದುಕಿನ ಮೂಲಕವೇ ತೋರಿಸಿದರು ಎಂದು ಹೇಳಿದರು. ಇಂದಿನ ಯುವಜನತೆ ಸಾಮಾಜಿಕ ಜಾಲತಾಣ ಮತ್ತು ಆಧುನಿಕ ಬದುಕಿನ ಒತ್ತಡಗಳ ನಡುವೆ ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಸಂತ ರವಿದಾಸರ ವಿಚಾರಗಳು ಅತ್ಯಂತ ಪ್ರಸ್ತುತವಾಗಿವೆ ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶ್ರಮ, ವಿನಯ, ಸಹಾನುಭೂತಿ ಹಾಗೂ ಸತ್ಯವನ್ನು ಅಳವಡಿಸಿಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಹೇಳಿದರು. ಕನ್ನಡ ಸಾಹಿತ್ಯ, ಭಕ್ತಿ ಚಳವಳಿ ಹಾಗೂ ಭಾರತೀಯ ಸಂತ ಪರಂಪರೆಯ ವೈಭವವನ್ನು ಅವರು ಅತ್ಯಂತ ಮನೋಜ್ಞವಾಗಿ ವಿವರಿಸಿ ವಿದ್ಯಾರ್ಥಿಗಳ ಮನಸೆಳೆದರು.

ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣ ಮಾಡಿದ ಡಾ. ಮಾಧವ ಎಂ.ಕೆ., ಪ್ರಾಧ್ಯಾಪಕರು, ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿಗಳು, ಭಾರತೀಯ ಸಂತ ಪರಂಪರೆಯ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿಗಳು ಶರಣರು ಮತ್ತು ಸಂತರ ಬದುಕನ್ನು ಅರಿತುಕೊಂಡಾಗ ಮೌಲ್ಯಯುತ ಬದುಕಿನ ದಾರಿಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಇಂತಹ ಉಪನ್ಯಾಸಮಾಲೆಗಳು ವಿದ್ಯಾರ್ಥಿಗಳಲ್ಲಿ ಚಿಂತನಾ ಶಕ್ತಿಯನ್ನು ಬೆಳೆಸುತ್ತವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇದರ ಪ್ರಾಧ್ಯಾಪಕರಾದ ಪ್ರೊ. ನಾಗರತ್ನ ರಾವ್ ಅವರು “ಭಾರತೀಯ ಸಂತ ಪರಂಪರೆ” ವಿಷಯದ ಕುರಿತು ಆಳವಾದ ಉಪನ್ಯಾಸ ನೀಡಿದರು. ಭಾರತೀಯ ಸಂತರು ಸಮಾಜದಲ್ಲಿ ಸಮಾನತೆ, ಪ್ರೀತಿ, ಭಕ್ತಿ ಮತ್ತು ಮಾನವೀಯ ಮೌಲ್ಯಗಳನ್ನು ಹೇಗೆ ಬಿತ್ತರಿಸಿದರು ಎಂಬುದನ್ನು ಅವರು ಉದಾಹರಣೆಗಳೊಂದಿಗೆ ವಿವರಿಸಿದರು. ಸಂತ ರವಿದಾಸರ ವಚನಗಳು ಇಂದಿನ ಯುವಜನತೆಗೆ ದಾರಿದೀಪವಾಗಿದ್ದು, ಜೀವನದಲ್ಲಿ ಪರಿಶ್ರಮ ಹಾಗೂ ವಿನಯವನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುತ್ತವೆ ಎಂದು ಹೇಳಿದರು. ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿದ ಅವರು ಉಪನ್ಯಾಸವನ್ನು ಮನಮುಟ್ಟುವ ರೀತಿಯಲ್ಲಿ ತಿಳಿಸಿದರು.

ಕಾರ್ಯಕ್ರಮದ ಸಂಯೋಜಕರಾದ ಹಿಂದಿ ವಿಭಾಗದ ಮುಖ್ಯಸ್ಥರು ಡಾ. ವಂದನಾ ಅತಿಥಿಗಳನ್ನು ಸ್ವಾಗತಿಸಿದರು , ಕನ್ನಡ ವಿಭಾಗದ ಮುಖ್ಯಸ್ಥರಾದ ಸುಚಿತ್ರ. ಪಿ. ಶೆಟ್ಟಿ ವಂದಿಸಿದರು. ಪ್ರಥಮ ಬಿ.ಬಿ.ಎ ವಿದ್ಯಾರ್ಥಿನಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಕಾರ್ಯಕ್ರಮವು ಸಂತ ರವಿದಾಸರ ಮೌಲ್ಯಗಳು ಮತ್ತು ಭಾರತೀಯ ಸಂತ ಪರಂಪರೆಯ ಮಹತ್ವವನ್ನು ವಿದ್ಯಾರ್ಥಿಗಳ ಮನಸ್ಸಿನಲ್ಲಿ ನೆಲೆಯೂರಿಸುವಲ್ಲಿ ಯಶಸ್ವಿಯಾಯಿತು.

LEAVE A REPLY

Please enter your comment!
Please enter your name here