ಪ್ರೀತಿಸಿ ಮದುವೆಯಾದ ಗಂಡನನ್ನೇ ಮಲಗುವ ಕೋಣೆಯಲ್ಲಿ ಕೊಂದ ಪತ್ನಿ ; ಕಬ್ಬಿಣದ ಸಲಾಕೆಯಿಂದ ಭೀಕರ ಹತ್ಯೆ..!

0
12

ಗದಗ : ಪ್ರೇಮ ವಿವಾಹವಾಗಿ ಸುಖ ಜೀವನ ನಡೆಸಬೇಕಿದ್ದ ದಂಪತಿಯ ದಾಂಪತ್ಯ ಕಲಹ ಕೊನೆಗೆ ಭೀಕರ ಹತ್ಯೆಯಲ್ಲಿ ಅಂತ್ಯಗೊಂಡಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೇರ ನಾಗನೂರು ಗ್ರಾಮದಲ್ಲಿ ನಡೆದಿದೆ. ಪತ್ನಿಯೊಬ್ಬಳು ತನ್ನ ಗಂಡನ ತಲೆ ಹಾಗೂ ದೇಹಕ್ಕೆ ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಿ ಕ್ರೂರವಾಗಿ ಹತ್ಯೆ ಮಾಡಿದ್ದಾಳೆ.

ಮೃತರನ್ನು ವಿಶ್ವನಾಥ ಹಾದಿಮನಿ (29) ಎಂದು ಗುರುತಿಸಲಾಗಿದ್ದು, ಕೊಲೆ ಆರೋಪದಡಿ ಪತ್ನಿ ಕವಿತಾಳನ್ನು ನರಗುಂದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮೂಲಗಳ ಪ್ರಕಾರ, ವಿಶ್ವನಾಥ್ ಮತ್ತು ಕವಿತಾ 2022ರಲ್ಲಿ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಆದರೆ ಮದುವೆಯಾದ ಬಳಿಕ ಸಣ್ಣಪುಟ್ಟ ವಿಷಯಗಳಿಗೂ ದಂಪತಿಯ ನಡುವೆ ನಿರಂತರ ಜಗಳಗಳು ನಡೆಯುತ್ತಿದ್ದು, ದಾಂಪತ್ಯ ಜೀವನದಲ್ಲಿ ಅಶಾಂತಿ ಮನೆಮಾಡಿತ್ತು ಎನ್ನಲಾಗಿದೆ.

ಕೌಟುಂಬಿಕ ಕಲಹ ತೀವ್ರಗೊಂಡ ಹಿನ್ನೆಲೆ ಕೆಲ ತಿಂಗಳುಗಳ ಹಿಂದೆ ಕವಿತಾ ತವರು ಮನೆ ಸೇರಿದ್ದಳು. ಬಳಿಕ ಕುಟುಂಬದ ಹಿರಿಯರು ಸಂಧಾನ ನಡೆಸಿ ಇಬ್ಬರನ್ನೂ ಒಂದಾಗಿಸಿದ್ದರು. ಅದರಂತೆ ಕೇವಲ 15 ದಿನಗಳ ಹಿಂದಷ್ಟೇ ಕವಿತಾ ಮತ್ತೆ ಗಂಡನ ಮನೆಗೆ ಬಂದಿದ್ದಳು. ಆದರೆ ಮನಸ್ತಾಪಗಳು ಮಾತ್ರ ಕಡಿಮೆಯಾಗಿರಲಿಲ್ಲ ಎಂದು ತಿಳಿದುಬಂದಿದೆ.

ಬುಧವಾರ ರಾತ್ರಿ ಮತ್ತೆ ಪತಿ-ಪತ್ನಿಯ ನಡುವೆ ತೀವ್ರ ಜಗಳ ನಡೆದಿದ್ದು, ಆಕ್ರೋಶಗೊಂಡ ಕವಿತಾ ಮನೆಯಲ್ಲಿದ್ದ ಕಬ್ಬಿಣದ ಸಲಾಕೆಯನ್ನು ತೆಗೆದುಕೊಂಡು ಮಲಗುವ ಕೋಣೆಯಲ್ಲಿದ್ದ ವಿಶ್ವನಾಥ್ ಮೇಲೆ ಹಲ್ಲೆ ನಡೆಸಿದ್ದಾಳೆ. ತಲೆಗೆ ಹಾಗೂ ದೇಹದ ಭಾಗಗಳಿಗೆ ಬಲವಾಗಿ ಹೊಡೆದ ಪರಿಣಾಮ ವಿಶ್ವನಾಥ್ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ನರಗುಂದ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಆರೋಪಿ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here