
ಮೂಡುಬಿದಿರೆ : ಭಾರತ ಸರ್ಕಾರದ ಜ್ಞಾನ ಭಾರತಂ ಮಿಷನ್ ಅಡಿಯಲ್ಲಿ ದೇಶದ ಪ್ರಾಚೀನ ಹಸ್ತಪ್ರತಿಗಳ ಸಂರಕ್ಷಣೆ ಮತ್ತು ದಾಖಲಾತಿಗಾಗಿ ಕೈಗೊಳ್ಳಲಾಗಿರುವ ಸಮೀಕ್ಷೆ ಹಾಗೂ ಡಿಜಿಟಲೀಕರಣ ಅಭಿಯಾನದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ಕಾರ್ಯಕ್ರಮ ನಡೆಯಿತು.
ಮಾರ್ಚ್ 2026ರಿಂದ ಮೇ ತಿಂಗಳವರೆಗೆ ಕರ್ನಾಟಕದಾದ್ಯಂತ ಪ್ರಾಚೀನ ಹಸ್ತಪ್ರತಿಗಳ ಸಮೀಕ್ಷೆ ನಡೆಸಲಾಗಿದ್ದು, ಅದರ ಮುಂದುವರಿದ ಭಾಗವಾಗಿ ಜುಲೈ 24ರಂದು ಸಂಜೆ 6.30ಕ್ಕೆ ನಡೆದ ಕಾರ್ಯಕ್ರಮದಲ್ಲಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಅವರು ಹಸ್ತಪ್ರತಿಗಳ ಸಮೀಕ್ಷೆ ಮತ್ತು ಡಿಜಿಟಲೀಕರಣ ಕಾರ್ಯಕ್ಕೆ ಅಧಿಕೃತ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಅಧಿಕಾರಿ ಡಾ. ಜಿ.ವಿ. ಕಲ್ಲಾಪುರ, ಡಾ. ವೆಂಕಟೇಶ್ ಎಂ. ಗಿರಿ, ಡಾ. ಕೆ.ಎಸ್.ಎನ್. ಉಡುಪ, ಶ್ರವಣಮಠದ ವ್ಯವಸ್ಥಾಪಕ ಸಂಜಯಂತ್ ಕುಮಾರ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ, ಜಿಲ್ಲೆಯ ಜನರು ತಮ್ಮ ಬಳಿ ಇರುವ ಪ್ರಾಚೀನ ಹಸ್ತಪ್ರತಿಗಳು, ತಾಳೆಓಲೆಗಳು ಹಾಗೂ ಅಪರೂಪದ ಗ್ರಂಥಗಳನ್ನು ಸಮೀಕ್ಷೆಗೆ ಒದಗಿಸುವ ಮೂಲಕ ಅವುಗಳ ಸಂರಕ್ಷಣೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಇಂತಹ ಅಮೂಲ್ಯ ಗ್ರಂಥ ಸಂಪತ್ತನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಲು ಡಿಜಿಟಲೀಕರಣ ಅತ್ಯಂತ ಅಗತ್ಯವಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಶ್ರೀಮಠ ಹಾಗೂ ರಮಾರಾಣಿ ಶೋಧ ಸಂಸ್ಥಾನದ ಸಂಗ್ರಹದಲ್ಲಿರುವ ಅಪರೂಪದ ತಾಳೆಓಲೆ ಹಸ್ತಪ್ರತಿಗಳ ಸಮೀಕ್ಷೆ ನಡೆಸಲಾಯಿತು. ಈ ಅಭಿಯಾನವು ಜಿಲ್ಲೆಯ ಐತಿಹಾಸಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ದಾಖಲಿಸಿ ಸಂರಕ್ಷಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
