30 ವರ್ಷಗಳ ಕಾಲ ಮಹಿಳೆಯ ಮೇಲೆ ಅಮಾನವೀಯ ದೌರ್ಜನ್ಯ; ವಿಕೃತ ಕಾಮುಕನಿಗೆ 16 ವರ್ಷ ಜೈಲು ಶಿಕ್ಷೆ

0
10

ಲಂಡನ್ : ಮಹಿಳೆಯೊಬ್ಬರನ್ನು ಸುಮಾರು ಮೂರು ದಶಕಗಳ ಕಾಲ ನರಕಯಾತನೆಗೆ ದೂಡಿದ ಭೀಕರ ಪ್ರಕರಣವೊಂದರಲ್ಲಿ, 67 ವರ್ಷದ ವ್ಯಕ್ತಿಗೆ ನ್ಯಾಯಾಲಯ 16 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಮಹಿಳೆಯನ್ನು ಬೆದರಿಕೆ ಮತ್ತು ಒತ್ತಡದ ಮೂಲಕ ಸಾವಿರಕ್ಕೂ ಹೆಚ್ಚು ಪುರುಷರೊಂದಿಗೆ ಬಲವಂತವಾಗಿ ಲೈಂಗಿಕ ಸಂಪರ್ಕ ಹೊಂದುವಂತೆ ಮಾಡಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈ ಶಿಕ್ಷೆ ಪ್ರಕಟಿಸಲಾಗಿದೆ.

ಆರೋಪಿಯನ್ನು ನಾರ್ಫೋಕ್‌ನ ಸ್ಟಾರ್ಸ್ಟನ್ ನಿವಾಸಿ ರಾಡ್ನಿ ಜಾನ್ಸ್ಟನ್ (67) ಎಂದು ಗುರುತಿಸಲಾಗಿದೆ. ತನಿಖೆಯ ಪ್ರಕಾರ, ಆತ ಕಳೆದ ಸುಮಾರು 30 ವರ್ಷಗಳಿಂದ ಮಹಿಳೆಯನ್ನು ತನ್ನ ವಿಕೃತ ಉದ್ದೇಶಗಳಿಗೆ ಬಳಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

30 ವರ್ಷಗಳ ನರಕಯಾತನೆ

ನ್ಯಾಯಾಲಯದಲ್ಲಿ ಬಹಿರಂಗವಾದ ಮಾಹಿತಿಯ ಪ್ರಕಾರ, ಆರೋಪಿ ಮಹಿಳೆಯನ್ನು ಗ್ರಾಮೀಣ ಪ್ರದೇಶಗಳು, ಹೋಟೆಲ್‌ಗಳು ಮತ್ತು ವಾಹನಗಳಲ್ಲಿ ಅಪರಿಚಿತ ಪುರುಷರೊಂದಿಗೆ ಬಲವಂತವಾಗಿ ಕಳುಹಿಸುತ್ತಿದ್ದ. ಕೆಲ ದಿನಗಳಲ್ಲಿ ದಿನಕ್ಕೆ 15ಕ್ಕೂ ಹೆಚ್ಚು ಮಂದಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಆರೋಪಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಪುರುಷರನ್ನು ಸಂಪರ್ಕಿಸಿ, ಸಮಯ ಮತ್ತು ಸ್ಥಳ ನಿಗದಿಪಡಿಸಿ ಹಣ ವಸೂಲಿ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

30,000ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ಪತ್ತೆ

ತನಿಖೆಯ ವೇಳೆ ಆರೋಪಿಯಿಂದ ಸುಮಾರು 30,000ಕ್ಕೂ ಹೆಚ್ಚು ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಹಿಳೆಯ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳನ್ನು ಆತ ಮೊಬೈಲ್ ಹಾಗೂ ಕ್ಯಾಮೆರಾಗಳಲ್ಲಿ ಚಿತ್ರೀಕರಿಸುತ್ತಿದ್ದ ಎಂದು ತಿಳಿದುಬಂದಿದೆ.

ನ್ಯಾಯಾಲಯದಲ್ಲಿ ಸಂತ್ರಸ್ತೆ ತನ್ನ ನೋವನ್ನು ಹಂಚಿಕೊಂಡಿದ್ದು, “ಆತ ನನ್ನನ್ನು ಮನುಷ್ಯಳಂತೆ ನೋಡದೆ ಕೇವಲ ವಸ್ತುವಿನಂತೆ ಬಳಸಿಕೊಂಡ” ಎಂದು ಕಣ್ಣೀರಿಟ್ಟಿದ್ದಾರೆ.

2024ರ ಜುಲೈನಲ್ಲಿ ಮಹಿಳೆಯ ಮಕ್ಕಳಿಗೆ ಅಶ್ಲೀಲ ಫೋಟೋ ಮತ್ತು ವಿಡಿಯೋಗಳು ಆಕಸ್ಮಿಕವಾಗಿ ಸಿಕ್ಕಿದ್ದವು. ಬಳಿಕ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ವೇಳೆ ಮೂರು ದಶಕಗಳ ಕಾಲ ನಡೆದಿದ್ದ ದೌರ್ಜನ್ಯ ಬಹಿರಂಗವಾಗಿದೆ.

ಆರೋಪಿಯ ವಾದ ತಳ್ಳಿಹಾಕಿದ ನ್ಯಾಯಾಲಯ

ವಿಚಾರಣೆ ವೇಳೆ ಮಹಿಳೆ ಸ್ವಯಂ ಇಚ್ಛೆಯಿಂದಲೇ ಇದರಲ್ಲಿ ಭಾಗಿಯಾಗಿದ್ದಳು ಎಂದು ಆರೋಪಿ ವಾದಿಸಿದ್ದಾನೆ. ಆದರೆ ನ್ಯಾಯಾಲಯ ಆ ವಾದವನ್ನು ತಳ್ಳಿಹಾಕಿ ಆರೋಪಿಯನ್ನು ದೋಷಿ ಎಂದು ಘೋಷಿಸಿದೆ.

LEAVE A REPLY

Please enter your comment!
Please enter your name here