ಬೈಂದೂರು : ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‌ನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮಾನ್ಯ ಎಂ. (ಎಸ್.ಎಸ್.ಎಲ್.ಸಿ 99.36%, ಪದ್ಮಾವತಿ ಮತ್ತು ದಿ. ಮಹಾಬಲ ಮರಕಾಲ ಇವರ ಪುತ್ರಿ) ಇವಳಿಗೆ ಬೈಂದೂರು ತಾಲೂಕಿನ ಪಡುವರಿಯಲ್ಲಿ, ತನ್ನ ಮಾತಾಪಿತೃಗಳಾದ ಸತ್ಯಭಾಮ ಮತ್ತು ವೆಂಕಟನರಸಿಂಹ ಉಪಾಧ್ಯಾಯ ಇವರ ಸ್ಮರಣೆಯಲ್ಲಿ ಅವರ ಪುತ್ರ, ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಜಿ. ಎಂ.,ಕಾರ್ಕಳ ಕಲ್ಮಠದ ದೇವಾನಂದ ಉಪಾಧ್ಯಾಯ ಮತ್ತು ಪತ್ನಿ ನಮಿತಾ ಉಪಾಧ್ಯಾಯರ ಪ್ರಾಯೋಜಕತ್ವದಲ್ಲಿ ಪುನರ್ನವೀಕರಣಗೊಂಡ ಮನೆ ‘ಭಾನು’ ಉದ್ಘಾಟನೆಗೊಂಡಿತು.

ಜ್ಯೋತಿ ಬೆಳಗಿಸಿದ ದೇವಾನಂದರು,ಸಮಾಜದಲ್ಲಿ ಉಳ್ಳವರು ಇಲ್ಲದವರಿಗೆ ಸಹಾಯ ಮಾಡಬೇಕಾದುದು ಕರ್ತವ್ಯ. ಆಗ ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ. ನನಗೆ ಉಪಕಾರ ಮಾಡಿದ್ದೇನೆಂಬ ಭ್ರಮೆಯಿಲ್ಲ. ಯಕ್ಷಗಾನ ಕಲಾರಂಗ ಮಾಡುವ ಒಳ್ಳೆಯ ಕೆಲಸಕ್ಕೆ ಸಹಕರಿಸಿ ನನ್ನ ಕರ್ತವ್ಯ ನಿರ್ವಹಿಸಿದ್ದೇನೆ. ಮಾನ್ಯ ದೊಡ್ಡ ಗುರಿ ಇಟ್ಟುಕೊಂಡಿದ್ದಾಳೆ. ಅವಳ ಕನಸು ನನಸಾಗಲೆಂದು ಆಶೀರ್ವದಿಸಿದರು. ಅಧ್ಯಕ್ಷತೆ ವಹಿಸಿದ್ದ ಸಂದೀಪನ್ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಸಂಜೀತ್ ಪ್ರಕಾಶ್ ರಾವ್ ಮಾತನಾಡಿ,ಯಕ್ಷಗಾನ ಕಲಾರಂಗ ಮಾಡುತ್ತಿರುವ ಕೆಲಸದ ಕುರಿತು ಕೇಳಿ ಆಶ್ಚರ್ಯವಾಯಿತು.

ಒಂದು ಸಂಸ್ಥೆ ಸಾಮಾಜಿಕ-ಸಾಂಸ್ಕೃತಿಕ ಕಳಕಳಿಯಿಂದ ಏನೆಲ್ಲ ಒಳ್ಳೆಯ ಕೆಲಸ ಮಾಡಬಹುದು ಎಂಬುದಕ್ಕೆ ಯಕ್ಷಗಾನ ಕಲಾರಂಗ ಅತ್ಯುತ್ತಮ ಉದಾಹರಣೆ. ಈ ಸಂಸ್ಥೆಯ ಸತ್ಕಾರ್ಯಕ್ಕೆ ನಾನು ಸದಾ ಬೆಂಬಲಿಸುತ್ತೇನೆ. ಬಡತನದ ನಡುವೆಯೂ ಅತ್ಯುತ್ತಮ ಶೈಕ್ಷಣಿಕ ಸಾಧನೆಗೈದ ಮಾನ್ಯಳನ್ನು ಅಭಿನಂದಿಸಿ ಕಠಿಣ ಪರಿಶ್ರಮದಿಂದ ಇದನ್ನು ಮುಂದುವರಿಸು, ಸದಾ ನಿನಗೆ ಮಾರ್ಗದರ್ಶಕನಾಗಿ ನಾನಿರುತ್ತೇನೆ ಎಂದರು.
ವೇದಿಕೆಯಲ್ಲಿ ಸಾಂದೀಪನ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವಿಶ್ವೇಶ್ವರ ಅಡಿಗ, ಅಭ್ಯಾಗತರುಗಳಾದ ಕೊಲ್ಲೂರು ಮೂಕಾಂಬಿಕಾ ದೇವಳದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಮಹಾಲಿಂಗ ನಾಯ್ಕ್, ನ್ಯಾಯವಾದಿ ದೇವರಾಜ ಶೆಟ್ಟಿಗಾರ್, ಅಪ್ನಾ ಹಾಲಿಡೇಸ್‌ನ ಮರವಂತೆ ನಾಗರಾಜ ಹೆಬ್ಬಾರ್ ಇವರುಗಳು ವಿದ್ಯಾರ್ಥಿನಿಯ ಸಾಧನೆಯನ್ನು ಶ್ಲಾಘಿಸಿ ಯಕ್ಷಗಾನ ಕಲಾರಂಗವು ಪಾರದರ್ಶಕ ವ್ಯವಹಾರ ಮತ್ತು ಕೆಲಸದ ಬದ್ಧತೆಯಿಂದ ಸಮಾಜದಲ್ಲಿ ಎಲ್ಲರ ವಿಶ್ವಾಸಕ್ಕೆ ಪಾತ್ರವಾಗಿದೆ. ಸಂಸ್ಥೆಯ ನಾಯಕತ್ವ ಮತ್ತು ಕಾರ್ಯಕರ್ತರ ಅರ್ಪಣಾ ಮನೋಭಾವ ಎಲ್ಲಾ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.
ಸಂಸ್ಥೆಯ ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್, ಸದಸ್ಯರುಗಳಾದ ಯು. ವಿಶ್ವನಾಥ ಶೆಣೈ, ಯು. ಎಸ್. ರಾಜಗೋಪಾಲ ಆಚಾರ್ಯ, ವಿಜಯಕುಮಾರ್ ಮುದ್ರಾಡಿ, ಭುವನಪ್ರಸಾದ್ ಹೆಗ್ಡೆ,ಅನಂತರಾಜ್ ಉಪಾಧ್ಯಾಯ,ಹಿರಿಯಣ್ಣ ಕಿದಿಯೂರು, ಪ್ರಭಾಕರ ಬಂಡಿ, ಪ್ರಸನ್ನ ಹೆಗಡೆ ಉಪಸ್ಥಿತರಿದ್ದರು. ಬೈಂದೂರು ಸರಕಾರಿ ಪ್ರೌಢಶಾಲೆಯ ಅಧ್ಯಾಪಕ ವೃಂದದವರು ಹಾಗೂ ಕೊಲ್ಲೂರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ನಾಗರಾಜ ಭಟ್ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮಾನ್ಯಳ ಅಪೇಕ್ಷೆಯಂತೆ ಅವಳ ನೆಚ್ಚಿನ ಶಿಕ್ಷಕಿ ಕವಿತಾ ಅವರ ಜನ್ಮದಿನವನ್ನು ಆಚರಿಸಲಾಯಿತು.
ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.

