ಕಣ್ಣಮುಂದೆ ಬಂಗಾರ ಇದ್ರೂ ಮುಟ್ಟಲ್ಲ.. ಬೆಳ್ಳಿ ಕಂಡ್ರೆ ಬಿಡೋಲ್ಲ! ವಿಚಿತ್ರ ಕಳ್ಳರ ಗ್ಯಾಂಗ್‌ಗೆ ಪೊಲೀಸರೇ ಶಾಕ್!

0
69

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ನಡೆದ ವಿಚಿತ್ರ ಕಳ್ಳತನ ಪ್ರಕರಣವೊಂದು ಪೊಲೀಸರನ್ನೇ ಬೆಚ್ಚಿಬೀಳಿಸಿದೆ. ಸಾಮಾನ್ಯವಾಗಿ ಜ್ಯುವೆಲರಿ ಅಂಗಡಿಗೆ ಕಳ್ಳರು ನುಗ್ಗಿದರೆ ಚಿನ್ನದ ಮೇಲೆಯೇ ಕಣ್ಣಿಡುತ್ತಾರೆ. ಆದರೆ ಇಲ್ಲಿ ಮಾತ್ರ ಸ್ಟೋರಿ ಸಂಪೂರ್ಣ ರಿವರ್ಸ್! ಅಂಗಡಿಯಲ್ಲಿ ಕೆಜಿಗಟ್ಟಲೇ ಬಂಗಾರ ಕಣ್ಣ ಮುಂದೆ ಇದ್ದರೂ ಅದನ್ನು ಮುಟ್ಟದೆ, ಕೇವಲ ಬೆಳ್ಳಿಯನ್ನು ಮಾತ್ರ ಟಾರ್ಗೆಟ್ ಮಾಡಿಕೊಂಡು ಕಳ್ಳತನ ನಡೆಸಿರುವ ಘಟನೆ ಹೆಸರಘಟ್ಟದಲ್ಲಿ ಬೆಳಕಿಗೆ ಬಂದಿದೆ.

ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಎಂಬಿ ಜ್ಯುವೆಲರ್ಸ್ ಅಂಗಡಿಯಲ್ಲಿ ಏಪ್ರಿಲ್ 27ರ ಬೆಳಗಿನ ಜಾವ ಈ ಕಳ್ಳತನ ನಡೆದಿದೆ. ಖದೀಮರು ಅಂಗಡಿಯ ಗೋಡೆ ಕೊರೆದು ಒಳಗೆ ನುಗ್ಗಿದ್ದು, ನೇರವಾಗಿ ಬೆಳ್ಳಿ ಇಟ್ಟಿದ್ದ ವಿಭಾಗಕ್ಕೆ ತೆರಳಿದ್ದಾರೆ. ಕೆಲವೇ ನಿಮಿಷಗಳಲ್ಲಿ ಕೆಜಿಗಟ್ಟಲೇ ಬೆಳ್ಳಿಯನ್ನು ದೋಚಿ ಪರಾರಿಯಾಗಿದ್ದಾರೆ.

ಬೆಳಗ್ಗೆ ಅಂಗಡಿ ತೆರೆಯಲು ಬಂದ ಮಾಲೀಕನಿಗೆ ಶಾಕ್ ಕಾದಿತ್ತು. ಅಂಗಡಿಯಲ್ಲಿ ಬೆಲೆಬಾಳುವ ಚಿನ್ನದ ಆಭರಣಗಳು ಹಾಗೆಯೇ ಇದ್ದು, ಬೆಳ್ಳಿ ಮಾತ್ರ ಒಂದು ತುಂಡು ಕೂಡ ಬಿಡದೆ ಕಳ್ಳತನವಾಗಿತ್ತು. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಪೊಲೀಸರೂ ಕ್ಷಣಕಾಲ ಕಂಗಾಲಾಗಿದ್ದರು.

ಕಳ್ಳತನದ ಬಳಿಕ ಗ್ಯಾಂಗ್ ನೇರವಾಗಿ ಹೈದರಾಬಾದ್‌ಗೆ ತೆರಳಿ, ದೋಚಿದ ಬೆಳ್ಳಿಯ ಅರ್ಧ ಭಾಗವನ್ನು ಮಾರಾಟ ಮಾಡಿದೆ. ನಂತರ ಯಾವುದೇ ಸುಳಿವು ಸಿಗದಂತೆ ರಾಜಸ್ಥಾನಕ್ಕೆ ಎಸ್ಕೇಪ್ ಆಗಿತ್ತು. ಆದರೆ ಬಾಗಲಗುಂಟೆ ಪೊಲೀಸರು ಸೈಲೆಂಟ್ ಆಪರೇಷನ್ ಮೂಲಕ ಆರೋಪಿಗಳ ಹೆಜ್ಜೆಜಾಡು ಪತ್ತೆಹಚ್ಚಿದ್ದರು.

ಸಿಸಿಟಿವಿ ದೃಶ್ಯಗಳು, ಮೊಬೈಲ್ ಲೊಕೇಶನ್ ಹಾಗೂ ಟ್ರಾವೆಲ್ ಡೀಟೇಲ್ಸ್ ಆಧರಿಸಿ ರಾಜಸ್ಥಾನದಲ್ಲಿ ದಾಳಿ ನಡೆಸಿದ ಪೊಲೀಸರು ಜಾಟ್ ಸುರೇಶ್, ಧನರಾಮ್ ಹಾಗೂ ನೇಮಿ ಚಂದ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ ಸುಮಾರು ₹1 ಕೋಟಿ ಮೌಲ್ಯದ 36 ಕೆಜಿ ಬೆಳ್ಳಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಈ ಗ್ಯಾಂಗ್‌ನ ಕಿಂಗ್‌ಪಿನ್ ಮಹೇಂದ್ರ ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. ಆತನಿಗಾಗಿ ವಿಶೇಷ ತಂಡ ಬಲೆ ಬೀಸಿದ್ದು, ಆತ ಸಿಕ್ಕಿಬಿದ್ದರೆ ಇನ್ನಷ್ಟು ಶಾಕಿಂಗ್ ಕಳ್ಳತನ ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here