ಎಬೋಲಾ ಸೋಂಕು ಎಚ್ಚರಿಕೆ : ಈ ಲಕ್ಷಣ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ

0
101

ಬೆಂಗಳೂರು : ಜಾಗತಿಕ ಮಟ್ಟದಲ್ಲಿ ಮತ್ತೆ ಎಬೋಲಾ ವೈರಸ್ ಆತಂಕ ಹೆಚ್ಚಾಗಿದ್ದು, ಆಫ್ರಿಕಾದ ಕಾಂಗೊ ರಿಪಬ್ಲಿಕ್ ಹಾಗೂ ಉಗಾಂಡದಲ್ಲಿ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಸೋಂಕಿನ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ವಿಶ್ವ ಆರೋಗ್ಯ ಸಂಸ್ಥೆ (WHO) ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸಿದೆ. ಇದರ ಬೆನ್ನಲ್ಲೇ ಭಾರತ ಸರ್ಕಾರವೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಕಾಂಗೊ, ಉಗಾಂಡ ಹಾಗೂ ದಕ್ಷಿಣ ಸುಡಾನ್ ದೇಶಗಳಿಗೆ ಅನಗತ್ಯ ಪ್ರಯಾಣ ಮಾಡಬಾರದು ಎಂದು ಸೂಚನೆ ನೀಡಿದೆ.

ಇದೀಗ ಕರ್ನಾಟಕ ಸರ್ಕಾರವೂ ಎಚ್ಚೆತ್ತುಕೊಂಡಿದ್ದು, ಆರೋಗ್ಯ ಇಲಾಖೆಯ ಮೂಲಕ ಮುನ್ನೆಚ್ಚರಿಕಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ವಿಶೇಷವಾಗಿ ಎಬೋಲಾ ಪೀಡಿತ ದೇಶಗಳಿಂದ ರಾಜ್ಯಕ್ಕೆ ಮರಳಿದವರು 21 ದಿನಗಳ ಕಾಲ ಆರೋಗ್ಯದ ಮೇಲೆ ನಿಗಾ ವಹಿಸಬೇಕೆಂದು ಸೂಚಿಸಲಾಗಿದೆ.

ಎಬೋಲಾ ವೈರಸ್ ಎಂದರೇನು?

ಎಬೋಲಾ ಸೋಂಕಿಗೆ “ಆರ್ಥೋ ಎಬೋಲಾ ವೈರಸ್” ಎನ್ನುವ ವೈರಸ್ ಸಮೂಹ ಕಾರಣವಾಗಿದೆ. 1976ರಲ್ಲಿ ಕಾಂಗೊ ಮತ್ತು ದಕ್ಷಿಣ ಸುಡಾನ್ ಪ್ರದೇಶಗಳಲ್ಲಿ ಮೊದಲ ಬಾರಿಗೆ ಈ ಸೋಂಕು ಪತ್ತೆಯಾಗಿತ್ತು. ಎಬೋಲಾ ನದಿಯ ಸಮೀಪದಲ್ಲಿ ವೈರಸ್ ಕಂಡುಬಂದ ಕಾರಣ ಇದಕ್ಕೆ “ಎಬೋಲಾ” ಎಂಬ ಹೆಸರು ಬಂದಿದೆ. ಅತ್ಯಂತ ವೇಗವಾಗಿ ಹರಡುವ ಈ ವೈರಸ್ ಮಾರಣಾಂತಿಕವಾಗಿದ್ದು, ಸೋಂಕಿತರಲ್ಲಿ ಸಾವಿನ ಪ್ರಮಾಣ ಶೇ.50ರವರೆಗೆ ಇರುವುದಾಗಿ ಆರೋಗ್ಯ ತಜ್ಞರು ತಿಳಿಸಿದ್ದಾರೆ.

ಸೋಂಕು ಹರಡುವುದು ಹೇಗೆ?

ಬಾವಲಿ, ಕಾಡುಪ್ರಾಣಿಗಳಿಂದ ಮನುಷ್ಯರಿಗೆ ಹರಡಬಹುದು
ಸೋಂಕಿತರ ರಕ್ತ, ವಾಂತಿ, ವೀರ್ಯ ಸೇರಿದಂತೆ ದೇಹದ ಸ್ರಾವಗಳಿಂದ ಹರಡುತ್ತದೆ
ಸೋಂಕಿತ ವ್ಯಕ್ತಿಗಳ ನೇರ ಸಂಪರ್ಕದಿಂದ ಸೋಂಕು ತಗುಲಬಹುದು
ಸೋಂಕಿತರು ಬಳಸಿದ ವಸ್ತುಗಳಿಂದಲೂ ಅಪಾಯವಿದೆ
ಈ ಲಕ್ಷಣಗಳು ಕಂಡರೆ ಎಚ್ಚರ!

ಎಬೋಲಾ ಪೀಡಿತ ದೇಶಗಳಿಂದ ವಾಪಸ್ಸಾದ 21 ದಿನಗಳ ಒಳಗೆ ಈ ಕೆಳಗಿನ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ಸರ್ಕಾರ ಮನವಿ ಮಾಡಿದೆ.

ತೀವ್ರ ಜ್ವರ
ಅತಿಯಾದ ಸುಸ್ತು ಮತ್ತು ಅಯಾಸ
ತಲೆನೋವು
ಮೈಕೈ ನೋವು
ಗಂಟಲು ಕೆರೆತ ಅಥವಾ ಗಂಟಲು ನೋವು
ವಾಂತಿ
ರಕ್ತಸ್ರಾವದ ಲಕ್ಷಣಗಳು
ಮುನ್ನೆಚ್ಚರಿಕಾ ಕ್ರಮಗಳು
ಜನಜಂಗುಳಿ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸಿ
ಸೋಂಕಿತ ವ್ಯಕ್ತಿಗಳಿಂದ ದೂರವಿರಿ
ಅವರು ಬಳಸಿದ ವಸ್ತುಗಳನ್ನು ಮುಟ್ಟಬೇಡಿ
ಎಬೋಲಾ ಪೀಡಿತ ದೇಶಗಳಿಗೆ ಅನಗತ್ಯ ಪ್ರಯಾಣ ತಪ್ಪಿಸಿ
ಕೋತಿಗಳು ಹಾಗೂ ಬಾವಲಿಗಳ ವಾಸಸ್ಥಾನಗಳಿಂದ ದೂರವಿರಿ

ಆರೋಗ್ಯ ಇಲಾಖೆಯ ಸೂಚನೆಗಳನ್ನು ಪಾಲಿಸುವುದು ಹಾಗೂ ಯಾವುದೇ ಅನುಮಾನಾಸ್ಪದ ಲಕ್ಷಣ ಕಂಡುಬಂದ ಕೂಡಲೇ ವೈದ್ಯಕೀಯ ನೆರವು ಪಡೆಯುವುದು ಅತ್ಯಂತ ಅಗತ್ಯ ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.

LEAVE A REPLY

Please enter your comment!
Please enter your name here