ಛತ್ತೀಸ್‌ಗಢ: ಅನೈತಿಕ ಸಂಬಂಧದ ಶಂಕೆ ಹಿನ್ನೆಲೆ ಪತ್ನಿಯೊಬ್ಬಳು ನಿದ್ರಿಸುತ್ತಿದ್ದ ಪತಿಯ ಮೇಲೆ ಭೀಕರ ಹಲ್ಲೆ ನಡೆಸಿ ಆತನ ಖಾಸಗಿ ಅಂಗವನ್ನು ಕತ್ತರಿಸಿರುವ ಘಟನೆ ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ನಡೆದಿದೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಪತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಆರೋಪಿಯಾದ ಪತ್ನಿಯನ್ನು ವಶಕ್ಕೆ ಪಡೆದಿದ್ದಾರೆ.
ರಾಜೇಶ್ ಕೌಶಿಕ್ ಎಂಬಾತ ಕಟ್ಟಡ ಕಾರ್ಮಿಕನಾಗಿದ್ದು, ಆತನ ಪತ್ನಿ ದ್ರೌಪತಿ ಬಾಯಿ ಜೊತೆ ಕಳೆದ ಕೆಲವು ದಿನಗಳಿಂದ ಕೌಟುಂಬಿಕ ಕಲಹಗಳು ನಡೆಯುತ್ತಿತ್ತು ಎನ್ನಲಾಗಿದೆ. ರಾಜೇಶ್‌ಗೆ ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧವಿದೆ ಎಂಬ ಅನುಮಾನದಿಂದ ದ್ರೌಪತಿ ಪದೇ ಪದೇ ಜಗಳ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.
ಘಟನೆಯ ರಾತ್ರಿ ಇಬ್ಬರೂ ಕೂಡ ಜೊತೆಯಾಗಿ ಊಟ ಮಾಡಿ ಬಳಿಕ ಮಲಗಿದ್ದರು. ತಡರಾತ್ರಿ ವೇಳೆ ದ್ರೌಪತಿ, ಮಲಗಿದ್ದ ರಾಜೇಶ್ ಮೇಲೆ ಹಲ್ಲೆ ನಡೆಸಿ ಆತನ ಖಾಸಗಿ ಅಂಗವನ್ನು ಕತ್ತರಿಸಿದ್ದಾಳೆ ಎನ್ನಲಾಗಿದೆ. ತೀವ್ರ ರಕ್ತಸ್ರಾವದಿಂದ ಗಾಯಗೊಂಡ ರಾಜೇಶ್ ಸಹಾಯಕ್ಕಾಗಿ ಕಿರುಚುತ್ತಾ ಹೊರಗೆ ಓಡಿಬಂದಿದ್ದು, ಕುಟುಂಬ ಸದಸ್ಯರು ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ತಂದೆಯ ಕಿರುಚಾಟ ಕೇಳಿ ಎಚ್ಚರಗೊಂಡ ಅಪ್ರಾಪ್ತ ಪುತ್ರ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾನೆ. ಬಳಿಕ ಕುಟುಂಬಸ್ಥರು ಗಾಯಗೊಂಡ ರಾಜೇಶ್‌ನನ್ನು ಕತ್ತರಿಸಿದ ದೇಹದ ಭಾಗದೊಂದಿಗೆ ಸರ್ಕಾರಿ ಸ್ವಾಮ್ಯದ ಸಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಆತನಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ದ್ರೌಪತಿ ಬಾಯಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇನ್ನೊಂದೆಡೆ, ಅನೈತಿಕ ಸಂಬಂಧದ ಶಂಕೆ ಹಿನ್ನೆಲೆ ಸಹೋದರನೇ ತನ್ನ ಅಕ್ಕನ ಕತ್ತು ಸೀಳಿ ಹತ್ಯೆ ಮಾಡಿದ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ನಡೆದಿದೆ. ಸುಮಾ ಶಿವಶಂಕರ್ ವನಹಳ್ಳಿ (29) ಮೃತ ದುರ್ದೈವಿ. ಶಿಗ್ಗಾವಿ ಪಟ್ಟಣದ ಮೌಲಾಲಿ ಗುಡ್ಡದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಸುಮಾಳನ್ನು, ತಮ್ಮ ಸಂಜು ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಶಿಗ್ಗಾವಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

