ಬೆಂಗಳೂರು: ಸಾಲವಾಗಿ ನೀಡಿದ ಹಣವನ್ನು ವಾಪಸ್ ಕೇಳಿದ್ದಕ್ಕೆ ಆಟೋ ಚಾಲಕನನ್ನು ಸ್ನೇಹಿತರೇ ಬರ್ಬರವಾಗಿ ಹತ್ಯೆಗೈದು ನಿರ್ಜನ ಪ್ರದೇಶದಲ್ಲಿ ಹೂತು ಹಾಕಿರುವ ಭೀಕರ ಘಟನೆ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಗೇರಿ ಸಮೀಪದ ರಾಮಸಂದ್ರದಲ್ಲಿ ನಡೆದಿದೆ.
ತಾವರೆಕೆರೆಯ ಉದಯ್ ಲೇಔಟ್ ನಿವಾಸಿ ರಕ್ಷಿತ್ (25) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಬೀಪುರ ನಿವಾಸಿ ಮೊಹಿನ್ ಪಾಷಾ (24) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ವಶಕ್ಕೆ ಪಡೆದು ಬಾಲಮಂದಿರಕ್ಕೆ ಕಳುಹಿಸಲಾಗಿದೆ.
8 ಸಾವಿರ ರೂ. ಸಾಲವೇ ಕೊಲೆಗೆ ಕಾರಣ!
ಆಟೋ ಚಾಲಕನಾಗಿದ್ದ ರಕ್ಷಿತ್, ಕೆಲ ತಿಂಗಳ ಹಿಂದೆ ತನ್ನ ಸ್ನೇಹಿತ ಮೊಹಿನ್ ಪಾಷಾಗೆ 8 ಸಾವಿರ ರೂ. ಸಾಲ ನೀಡಿದ್ದ. ಆದರೆ ಹಣವನ್ನು ಸಮಯಕ್ಕೆ ಮರಳಿ ನೀಡದ ಹಿನ್ನೆಲೆ ರಕ್ಷಿತ್ ಪದೇ ಪದೇ ಹಣಕ್ಕಾಗಿ ಒತ್ತಾಯ ಮಾಡುತ್ತಿದ್ದ ಎನ್ನಲಾಗಿದೆ.
ಮೇ 23ರಂದು ಸಂಜೆ ರಕ್ಷಿತ್ ಕಂಬೀಪುರಕ್ಕೆ ಬಂದಾಗ ಮೊಹಿನ್ ಪಾಷಾ 2,500 ರೂ. ನೀಡಿದ್ದಾನೆ. ಬಳಿಕ ಅದೇ ಹಣದಲ್ಲಿ ಮದ್ಯ ಖರೀದಿಸಿ ಎಲ್ಲರೂ ಸೇರಿ ಮದ್ಯಪಾನ ಮಾಡಿದ್ದಾರೆ.
ಈ ವೇಳೆ ಮತ್ತೆ ಹಣದ ವಿಚಾರ ಪ್ರಸ್ತಾಪಿಸಿದ ರಕ್ಷಿತ್, ಉಳಿದ ಹಣ ಕೂಡಲೇ ಕೊಡುವಂತೆ ಒತ್ತಾಯಿಸಿ ಗಲಾಟೆ ನಡೆಸಿದ್ದಾನೆ. ಇದರಿಂದ ಕೋಪಗೊಂಡ ಆರೋಪಿಗಳು ಕಲ್ಲು ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿ ರಕ್ಷಿತ್‌ನನ್ನು ಕೊಲೆ ಮಾಡಿದ್ದಾರೆ.
ಕೊಲೆ ಬಳಿಕ ಶವ ಹೂತು ಪರಾರಿ
ಹತ್ಯೆ ಮಾಡಿದ ಬಳಿಕ ಆರೋಪಿಗಳು ರಕ್ಷಿತ್‌ನ ಶವವನ್ನು ರಾಮಸಂದ್ರ ಕೆರೆಯ ಸಮೀಪದ ನಿರ್ಜನ ಪ್ರದೇಶದಲ್ಲಿ ಹೂತು ಹಾಕಿದ್ದರು. ಬಳಿಕ ಮೃತನ ಆಟೋವನ್ನು ಜ್ಞಾನಭಾರತಿ ಬಳಿ ಬಿಟ್ಟು ಪರಾರಿಯಾಗಿದ್ದರು.
ತಾಯಿಯ ಅನುಮಾನದಿಂದ ಬಯಲಾಯ್ತು ಪ್ರಕರಣ
ಮಗ ನಾಪತ್ತೆಯಾಗಿದ್ದ ಹಿನ್ನೆಲೆ ರಕ್ಷಿತ್ ತಾಯಿ ಪುಷ್ಪಲತಾ ಅವರು ಮೊಹಿನ್ ಪಾಷಾ ಮೇಲೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು.
ದೂರು ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

