ಆಂಧ್ರಪ್ರದೇಶ : ತಾಯಿಯೇ ತನ್ನ ಅಪ್ರಾಪ್ತ ಮಗಳ ಮೇಲಿನ ದೌರ್ಜನ್ಯಕ್ಕೆ ಸಹಕರಿಸಿರುವ ಶಾಕಿಂಗ್ ಘಟನೆ ಆಂಧ್ರಪ್ರದೇಶದ ವೈಎಸ್‌ಆರ್ ಕಡಪ ಜಿಲ್ಲೆಯ ಪ್ರೊದ್ದಟೂರಿನಲ್ಲಿ ಬೆಳಕಿಗೆ ಬಂದಿದೆ. ಸಂತ್ರಸ್ತೆಯ ತಂದೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಘಟನೆ ತಡವಾಗಿ ಬಹಿರಂಗವಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಪುಲಿವೆಂದುಲ ಮೂಲದ ವಾಸುಕಿ (ಹೆಸರು ಬದಲಾಯಿಸಲಾಗಿದೆ) ಎಂಬಾಕೆಗೆ 2010ರಲ್ಲಿ ವಿವಾಹವಾಗಿತ್ತು. ದಂಪತಿಗೆ ಒಬ್ಬ ಮಗಳು ಹಾಗೂ ಒಬ್ಬ ಮಗ ಇದ್ದರು. ಪತಿ 2017ರಲ್ಲಿ ಉದ್ಯೋಗ ನಿಮಿತ್ತ ಕುವೈತ್‌ಗೆ ತೆರಳಿದ ಬಳಿಕ, ವಾಸುಕಿ ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು.
ಈ ವೇಳೆ ವಾಸುಕಿಗೆ ನವಕಿಶೋರ್ ಎಂಬಾತನ ಪರಿಚಯವಾಗಿ ಬಳಿಕ ಅದು ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಈ ವಿಚಾರ ಪತಿಗೆ ತಿಳಿದ ನಂತರ ಕುಟುಂಬದಲ್ಲಿ ಕಲಹ ಉಂಟಾಗಿ, ಕಳೆದ ವರ್ಷ ದಂಪತಿ ಬೇರ್ಪಟ್ಟಿದ್ದರು.
ಮಗಳ ಮೇಲೆ ಕಣ್ಣಿಟ್ಟ ಪ್ರಿಯಕರ
ತಾಯಿಯ ಪ್ರಿಯಕರ ನವಕಿಶೋರ್ ಬಾಲಕಿಯೊಂದಿಗೆ ಪದೇ ಪದೇ ಅಸಭ್ಯವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ. ಈ ವಿಷಯವನ್ನು ಬಾಲಕಿ ತನ್ನ ತಾಯಿಗೆ ತಿಳಿಸಿದಾಗ, “ಹೊರಗೆ ಹೇಳಿದರೆ ಕೊಲೆ ಮಾಡುತ್ತೇನೆ” ಎಂದು ಬೆದರಿಕೆ ಹಾಕಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಪ್ರಿಯಕರನಿಗೆ ಸಹಕರಿಸಿದ ತಾಯಿ!
ಬಾಲಕಿಯ ಮೇಲಿನ ಕಿರುಕುಳದ ಬಗ್ಗೆ ತಿಳಿದಿದ್ದರೂ, ತಾಯಿ ವಾಸುಕಿ ತನ್ನ ಪ್ರಿಯಕರನಿಗೆ ಬುದ್ಧಿ ಹೇಳುವ ಬದಲು ಅವನಿಗೆ ಸಹಕರಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ತಿಂಗಳ ಹಿಂದೆ, ತನ್ನ ಮಗಳನ್ನು ಬಲವಂತವಾಗಿ ನವಕಿಶೋರ್ ಇದ್ದ ಕೋಣೆಗೆ ಕರೆದೊಯ್ದಿದ್ದಾಳೆ. ಅಲ್ಲಿ ಆತ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಾಲಕಿ ಜೋರಾಗಿ ಕಿರುಚಿಕೊಂಡಾಗ ಅಲ್ಲಿಂದ ತಪ್ಪಿಸಿಕೊಂಡು ಪ್ರೊದ್ದಟೂರಿನಲ್ಲಿದ್ದ ತನ್ನ ತಂದೆಗೆ ವಿಷಯ ತಿಳಿಸಿದ್ದಾಳೆ.
ಮನೆ ಮೇಲೆ ಕಲ್ಲು ತೂರಾಟ
ಮೇ 24ರಂದು ಬಾಲಕಿಯ ತಾಯಿ ವಾಸುಕಿ, ಅಜ್ಜಿ ಹಾಗೂ ನವಕಿಶೋರ್‌ನ ಸಹೋದರಿ ಸ್ವಾತಿ ಸೇರಿ ಬಾಲಕಿಯ ತಂದೆಯ ಮನೆಗೆ ಬಂದು ತಮ್ಮೊಂದಿಗೆ ಬರಬೇಕೆಂದು ಒತ್ತಾಯಿಸಿದ್ದಾರೆ. ಈ ವೇಳೆ ಮನೆಯ ಮೇಲೆ ಕಲ್ಲು ತೂರಾಟ ನಡೆಸಿರುವುದಾಗಿ ಆರೋಪಿಸಲಾಗಿದೆ.
ನಾಲ್ವರ ವಿರುದ್ಧ ಪ್ರಕರಣ
ಘಟನೆ ಸಂಬಂಧ ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದು, ನವಕಿಶೋರ್, ಅವನ ಸಹೋದರಿ ಸ್ವಾತಿ, ಬಾಲಕಿಯ ತಾಯಿ ವಾಸುಕಿ ಹಾಗೂ ಅಜ್ಜಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಘಟನೆ ಸ್ಥಳೀಯರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

