ಹೆಬ್ರಿ : ಮುದ್ರಾಡಿ ಗ್ರಾಮದ ಮೇಲ್ಬೆಟ್ಟು ಹಳೆ ಕೆರೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ರಿ ವಲಯದಿಂದ ನಮ್ಮೂರು ನಮ್ಮ ಕೆರೆ ಗ್ರಾಮ ಯೋಜನೆಯಡಿಯಲ್ಲಿ 3.15 ಲಕ್ಷ ಒಟ್ಟು ರೂ.5.50 ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಸಿ ನಿರ್ಮಾಣಗೊಂಡ ಕೆರೆಯನ್ನು ಮುದ್ರಾಡಿ ಗ್ರಾಮ ಪಂಚಾಯತ್ ಗೆ ಹಸ್ತಾಂತರಿಸುವ ಕಾರ್ಯಕ್ರಮವು ಕೆರೆಯ ವಠಾರದಲ್ಲಿ ಮೇ. 27 ರಂದು ನಡೆಯಿತು.

ಶ್ರೀ. ಕ್ಷೇ. ಧ.ಗ್ರಾಮಾಭಿವೃದ್ಧಿ ಯೋಜನೆಯ ರಾಜ್ಯದ 954 ನೇ ಮೇಲ್ಬೆಟ್ಟು ಕೆರೆಯಾಗಿದ್ದು, ಮೇಲ್ಬೆಟ್ಟು ಕೆರೆ ಅಭಿವೃದ್ದಿ ಸಮಿತಿ ಮತ್ತು ಊರವರ ಸಹಕಾರದಿಂದ ನಿರ್ಮಾಣಗೊಂಡ ಕೆರೆಗೆ ಗಂಗಾ ಪೂಜೆ ನೆರವೇರಿದ ಬಳಿಕ ಕಾರ್ಕಳ ವಿಧಾನಸಭಾ ಕ್ಷೇತ್ರ ಶಾಸಕರಾದ ವಿ. ಸುನಿಲ್ ಕುಮಾರ್ ರವರು ಕೆರೆಯ ನಾಮಫಲಕ ಅನಾವರಣಗೊಳಿಸಿ ಲೋಕಾರ್ಪಣೆಗೈದು ಮುದ್ರಾಡಿ ಗ್ರಾಮ ಪಂಚಾಯತ್ ಗೆ ಹಸ್ತಾಂತರಿಸಿದರು.
ಅವರು ಬಳಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಕೆರೆ ಹಸ್ತಾಂತರ ಪ್ರಮಾಣ ಪತ್ರವನ್ನು ಮುದ್ರಾಡಿ ಗ್ರಾಮ ಪಂಚಾಯತ್ ಪಿ. ಡಿ. ಓ ರವರಿಗೆ ಹಸ್ತಾಂತರಿಸಿ ಮಾತನಾಡಿ ಪೂಜ್ಯ ಖಾವಂದರ ಪರಿಕಲ್ಪನೆಯಂತೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಒಂದಾದ ನಮ್ಮೂರು ನಮ್ಮ ಕೆರೆ ಯೋಜನೆಯಡಿಯಲ್ಲಿ, ಗ್ರಾಮೀಣ ಭಾಗದ ಜನರು ಸ್ವಾವಲಂಬನೆಯಾಗಲು ಹಾಗೂ ನೀರಿನ ಭವಣೆ ಹೋಗಲಾಡಿಸಲು ಕೆರೆ ಅಭಿವೃದ್ಧಿ ಸಹಕಾರಿಯಾಗಿದೆ, ಕೆರೆಯ ಅಭಿವೃದ್ಧಿಗೆ ಗ್ರಾಮ ಪಂಚಾಯತ್ ಮತ್ತು ಗ್ರಾಮಸ್ಥರು ಸಹಕಾರ ನೀಡಿದ್ದಾರೆ, ಎಲ್ಲರನ್ನೂ ಅಭಿನಂದಿಸುತ್ತೇನೆ ಇನ್ನು ಮುಂದೆ ಕೆರೆಯ ನಿರ್ವಹಣೆಯನ್ನು ಗ್ರಾಮ ಪಂಚಾಯತ್ ಮಾಡುವುದರೊಂದಿಗೆ ಊರವರ ಸಹಕಾರ, ಕೆರೆ ಅಭಿವೃದ್ಧಿ ಸಮಿತಿಯ ಸಹಕಾರ ಇದೇ ರೀತಿಯಲ್ಲಿ ಮುಂದುವರಿಯಲಿ ಎಂದರು.
ಕರ್ನಾಟಕ ಸರಕಾರ ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ರಾಜ್ಯ ಅಧ್ಯಕ್ಷರಾದ ಮುದ್ರಾಡಿ ಮಂಜುನಾಥ ಪೂಜಾರಿ, ಯೋಜನೆಯ ಜಿಲ್ಲಾ ನಿರ್ದೇಶಕರಾದ ನಾಗರಾಜ ಶೆಟ್ಟಿ, ಮುದ್ರಾಡಿ ಗ್ರಾಮ ಪಂಚಾಯತ್ ಪಿ. ಡಿ. ಓ. ಸುಭಾಸ್ ಖಾರ್ವಿ, ಗ್ರಾಮ ಆಡಳಿತಾಧಿಕಾರಿ ಮಿಥುನ್, ಕೆರೆ ಅಭಿವೃದ್ಧಿ ಸಮಿತಿಯ ಗೌರವ ಅಧ್ಯಕ್ಷರಾದ ಗಣಪತಿ. ಎಂ,ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸುಧಾಕರ ಶೆಟ್ಟಿ ಜನ ಜಾಗೃತಿ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ನೀರೆ ಕೃಷ್ಣ ಶೆಟ್ಟಿಯವರು ಕಾರ್ಯಕ್ರಮದ ಬಗ್ಗೆ ಮಾತನಾಡಿದರು.
ಜಿಲ್ಲಾ ಪದಾಧಿಕಾರಿಯವರಾದ ಯಶೋದ ಶೆಟ್ಟಿ, ತಾಲೂಕು ಅಧ್ಯಕ್ಷರಾದ ವಾದಿರಾಜ ಶೆಟ್ಟಿ, ವಲಯ ಅಧ್ಯಕ್ಷರಾದ ಸೀತಾನದಿ ವಿಠ್ಠಲ ಶೆಟ್ಟಿ,ವಲಯ ಜನ ಜಾಗೃತಿ ಅಧ್ಯಕ್ಷರಾದ ರತ್ನಾಕರ ಪೂಜಾರಿ, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಯೋಗೀಶ್ ಮೊದಲಾದವರು ಉಪಸ್ಥಿತರಿದ್ದರು.
ಹೆಬ್ರಿ ವಲಯ ಯೋಜನಾಧಿಕಾರಿ ರೇಷ್ಮಾ ಸ್ವಾಗತಿಸಿ, ರಚಿತಾ ನಿರೂಪಿಸಿ, ಯೋಜನೆಯ ಕೃಷಿ ಅಧಿಕಾರಿ ಉಮೇಶ್ ವಂದಿಸಿದರು.ಯೋಜನೆಯ ಸೇವಾ ಪ್ರತಿನಿಧಿ, ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ಕೆರೆ ಅಭಿವೃದ್ದಿ ಸಮಿತಿಯ ಸದಸ್ಯರು, ಮಾಜಿ ಪಂಚಾಯತ್ ಸದಸ್ಯರು, ಸಂಘ ಸಂಸ್ಥೆಯ ಪದಾಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು.

