ಅಪಘಾತ ಸಂತ್ರಸ್ತರಿಗೆ ತುರ್ತು ಚಿಕಿತ್ಸೆ ನೀಡುವುದು ಮೂಲಭೂತ ಹಕ್ಕು : ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು..!

0
46

ನವದೆಹಲಿ : ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಿಗೆ ತಕ್ಷಣ ತುರ್ತು ವೈದ್ಯಕೀಯ ಚಿಕಿತ್ಸೆ ನೀಡುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಜೀವಿಸುವ ಹಕ್ಕಿನ ಅಡಿಯಲ್ಲಿ (ಆರ್ಟಿಕಲ್ 21) ತುರ್ತು ಚಿಕಿತ್ಸೆ ನೀಡುವುದು ಸರ್ಕಾರ ಮತ್ತು ಆಸ್ಪತ್ರೆಗಳ ಕರ್ತವ್ಯವಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

‘ಸೇವ್‌ಲೈಫ್ ಫೌಂಡೇಶನ್’ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು ಕೇಂದ್ರ ಸರ್ಕಾರ, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹಲವು ಮಹತ್ವದ ನಿರ್ದೇಶನಗಳನ್ನು ನೀಡಿದೆ.

ನ್ಯಾಯಪೀಠದ ಅಭಿಪ್ರಾಯದಂತೆ, ಅಪಘಾತದ ನಂತರದ ಮೊದಲ ಕೆಲವು ನಿಮಿಷಗಳು ಅತ್ಯಂತ ಮಹತ್ವದ್ದಾಗಿದ್ದು, ಚಿಕಿತ್ಸೆ ನೀಡುವಲ್ಲಿ ಆಗುವ ವಿಳಂಬವು ಪ್ರಾಣಾಪಾಯಕ್ಕೆ ಕಾರಣವಾಗಬಹುದು. ಹೀಗಾಗಿ ಯಾವುದೇ ಆಸ್ಪತ್ರೆ ಶುಲ್ಕ, ದಾಖಲೆ ಅಥವಾ ಇತರ ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಚಿಕಿತ್ಸೆ ನಿರಾಕರಿಸಬಾರದು ಎಂದು ಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಅಪಘಾತ ಸಂತ್ರಸ್ತರನ್ನು ಆಸ್ಪತ್ರೆಗೆ ಸೇರಿಸುವ ಮಾನವೀಯ ಕೆಲಸ ಮಾಡುವ ‘ಗುಡ್ ಸಮಾರಿಟನ್ಸ್’‌ಗಳಿಗೆ ಪೊಲೀಸ್ ಕಿರುಕುಳ ಅಥವಾ ಅನಗತ್ಯ ವಿಚಾರಣೆ ನೀಡಬಾರದು ಎಂದು ಕೂಡ ಕೋರ್ಟ್ ಆದೇಶಿಸಿದೆ. ಜನರು ಭಯವಿಲ್ಲದೆ ಗಾಯಾಳುಗಳಿಗೆ ನೆರವಾಗುವ ವಾತಾವರಣ ನಿರ್ಮಿಸಬೇಕು ಎಂದು ತಿಳಿಸಿದೆ.

ಇದೇ ವೇಳೆ, ದೇಶದಾದ್ಯಂತ ರಸ್ತೆ ಅಪಘಾತಗಳಿಗೆ ತ್ವರಿತ ಪ್ರತಿಕ್ರಿಯೆ ನೀಡಲು ‘112’ ತುರ್ತು ಸಹಾಯವಾಣಿಯನ್ನು ಮುಂದಿನ ಮೂರು ತಿಂಗಳೊಳಗೆ ಸಂಪೂರ್ಣ ಜಾರಿಗೆ ತರಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಗಡುವು ನೀಡಲಾಗಿದೆ.

ಸುಪ್ರೀಂ ಕೋರ್ಟ್‌ನ ಈ ತೀರ್ಪು ರಸ್ತೆ ಅಪಘಾತಗಳಲ್ಲಿ ಸಾವಿನ ಪ್ರಮಾಣ ಕಡಿಮೆ ಮಾಡಲು ಹಾಗೂ ಗಾಯಾಳುಗಳಿಗೆ ಸಕಾಲದಲ್ಲಿ ಗುಣಮಟ್ಟದ ಚಿಕಿತ್ಸೆ ದೊರಕಿಸಲು ಮಹತ್ವದ ಹೆಜ್ಜೆಯಾಗಿದೆ.

LEAVE A REPLY

Please enter your comment!
Please enter your name here