ನನ್ನ ಜೀವನದ ಪ್ರತಿಯೊಂದು ಸಾಧನೆಗೂ ವಿದ್ಯಾಭ್ಯಾಸವೇ ಕಾರಣ : ಡಾ. ಕುಳೂರು ಕನ್ಯಾನ ಸದಾಶಿವ ಶೆಟ್ಟಿ

ಮಂಜೇಶ್ವರ : ಮೇ 27 ರಂದು ಸರಕಾರಿ ಪ್ರೌಢ ಶಾಲೆ ಮೂಡಂಬೈಲುನಲ್ಲಿ ಶತಮಾನೋತ್ಸವ ಸಂಭ್ರಮದ ಸಮಾರೋಪ ಸಮಾರಂಭ ಹಾಗೂ ನೂತನವಾಗಿ ನಿರ್ಮಿಸಲಾದ ರಂಗಮಂದಿರದ ಉದ್ಘಾಟನಾ ಸಮಾರಂಭ ಅದ್ಧೂರಿಯಾಗಿ ನೆರವೇರಿತು.
“ನಾನು ಏನೇನು ಸಾಧನೆ ಮಾಡಿದ್ದೇನೋ ಅದಕ್ಕೆ ನಾನು ಪಡೆದ ವಿದ್ಯಾಭ್ಯಾಸವೇ ಕಾರಣ. ಮೂಡಂಬೈಲು ಪ್ರೌಢ ಶಾಲೆ ನನಗೆ ಅತ್ಯಂತ ಹತ್ತಿರವಾದ ಶಾಲೆ. ನಾನು ಕುಳೂರು ಶಾಲೆಯಲ್ಲಿ ಕಲಿತಿದ್ದರೂ, ಮೂಡಂಬೈಲು ಶಾಲೆಯೊಂದಿಗೂ ನನಗೆ ಆತ್ಮೀಯ ಸಂಬಂಧವಿದೆ” ಎಂದು ರಂಗಮಂದಿರವನ್ನು ಉದ್ಘಾಟಿಸಿ ಮಾತನಾಡಿದ ಡಾ. ಕುಳೂರು ಕನ್ಯಾನ ಸದಾಶಿವ ಶೆಟ್ಟಿಯವರು ಶಾಲೆಯ ಹಳೆ ವಿದ್ಯಾರ್ಥಿಗಳು, ಶಿಕ್ಷಕ-ರಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಸಭಾ ಕಾರ್ಯಕ್ರಮವನ್ನು ಮಂಜೇಶ್ವರದ ಜನಪ್ರಿಯ ಶಾಸಕರಾದ ಎ.ಕೆ.ಎಂ. ಅಶ್ರಫ್ ಅವರು ಉದ್ಘಾಟಿಸಿ ಮಾತನಾಡುತ್ತಾ, “ಶಾಸಕನಾಗಿ ನನಗೆ ಸಿಕ್ಕ ಮೊದಲ ಕಾರ್ಯಕ್ರಮ ಹಾಗೂ ಮೊದಲ ಸನ್ಮಾನ ಇದಾಗಿದ್ದು, ಇದು ನನಗೆ ಅಪಾರ ಸಂತೋಷ ತಂದಿದೆ. ಮುಂದಿನ ದಿನಗಳಲ್ಲಿ ಮೂಡಂಬೈಲು ಶಾಲೆಯ ಪ್ರಗತಿಗಾಗಿ ನನ್ನಿಂದ ಸಾಧ್ಯವಿರುವ ಎಲ್ಲಾ ಸಹಕಾರವನ್ನು ನೀಡಲು ನಾನು ಸಿದ್ಧನಿದ್ದೇನೆ” ಎಂದರು. ಇದೇ ವೇಳೆ ಶಾಲೆಯ ಮುಖ್ಯ ಅಧ್ಯಾಪಕಿಯವರು ಸಲ್ಲಿಸಿದ ವಿನಂತಿಯನ್ನು ಸಾಧ್ಯವಾದಷ್ಟು ಬೇಗ ಈಡೇರಿಸುವುದಾಗಿ ಭರವಸೆ ನೀಡಿದರು.
ಹಿರಿಯರಾದ ಶಿವರಾಮ ಪದಕಣ್ಣಾಯರು ಮಾತನಾಡಿ ದಾನಿಗಳ ನೆರವಿನಿಂದ ಈ ಭವ್ಯವಾದ ರಂಗಮಂದಿರ ನಿರ್ಮಾಣ ಸಾಧ್ಯವಾಯಿತು. ಎಲ್ಲರ ಕನಸು ಈ ಮೂಲಕ ನನಸಾಗಿದ್ದು, “ಶಾಲೆ ಇನ್ನೂ ಅಭಿವೃದ್ಧಿಯಾಗಲಿ” ಎಂದು ಹಾರೈಸಿದರು. ಶಾಲೆಯ ಹಳೆ ವಿದ್ಯಾರ್ಥಿಗಳು, ಶಿಕ್ಷಕ-ರಕ್ಷಕ ವೃಂದ ಹಾಗೂ ಮಕ್ಕಳಿಗೆ ಶುಭ ಹಾರೈಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಸರಗೋಡು ಜಿಲ್ಲಾ ಪಂಚಾಯತ್‌ನ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನ ಇಕ್ಬಾಲ್ ವಹಿಸಿದ್ದರು. ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ನ್ಯಾ. ಎಂ. ದಾಮೋದರ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲಾ ಮುಖ್ಯ ಅಧ್ಯಾಪಕಿ ದಯಾವತಿ ಸಾಲಿಯಾನ್ ಅವರು ಸ್ವಾಗತಿಸಿದರು.

ಮುಖ್ಯ ಅತಿಥಿಗಳಾಗಿ ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯೆ ಜ್ಯೋತಿ ಪಿ. ರೈ, ಮೀಂಜ ಪಂಚಾಯತ್ ಉಪಾಧ್ಯಕ್ಷೆ ಉಷಾ ಪೂಂಜ, ಮಂಜೇಶ್ವರ ಶಿಕ್ಷಣಾಧಿಕಾರಿ ಜಾರ್ಜ್ ಕ್ರಾಸ್ತಾ ಸಿ.ಎಚ್., ಮೀಯಪದವು ಶಾಲೆಯ ವ್ಯವಸ್ಥಾಪಕರಾದ ಜಯಪ್ರಕಾಶ್ ನಾರಾಯಣ ತೊಟ್ಟೆತೋಡಿ, ಕರ್ನಾಟಕದ ಜನಮೆಚ್ಚಿದ ಶಿಕ್ಷಕ ಬಾಲಕೃಷ್ಣ ಭಂಡಾರಿ ದಡ್ಡಂಗಡಿ, ಬಲ್ಲಂಗುಡೆಲು ಕ್ಷೇತ್ರ ಸೇವಾ ಸಮಿತಿಯ ಅಧ್ಯಕ್ಷರಾದ ಜಯರಾಮ ಬಲ್ಲಂಗುಡೆಲು, ಪಟ್ಟತ್ತಮೊಗರು ಮಸೀದಿಯ ಅಧ್ಯಕ್ಷರಾದ ಅಬ್ದುಲ್ಲ ಕರಿಬೈಲು, ಮೂಡಂಬೈಲು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಮ್ ಪ್ರಕಾಶ್ ಆಳ್ವ ಪಟ್ಟತ್ತಮೊಗರು, ಶತಮಾನೋತ್ಸವ ಸಮಿತಿಯ ಕೋಶಾಧಿಕಾರಿ ಬಶೀರ್ ಮೂಡಂಬೈಲು, ಶತಮಾನೋತ್ಸವ ಪ್ರಚಾರ ಸಮಿತಿಯ ಸಂಚಾಲಕರಾದ ಜಗದೀಶ್ ಮೂಡಂಬೈಲು, ಶತಮಾನೋತ್ಸವ ಸಮಿತಿಯ ಕಾರ್ಯದರ್ಶಿ ಅನಂತ ನಾರಾಯಣ ಪದಕಣ್ಣಾಯ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಅಬ್ದುಲ್ಲ ಕುಂಞಿ ಹಾಗೂ ಎನ್.ಪಿ.ಟಿ.ಎ. ಅಧ್ಯಕ್ಷೆ ಅನುಪಮ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮೂಡಂಬೈಲು ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಶತಮಾನೋತ್ಸವ ಸಂಭ್ರಮದ ಸವಿ ನೆನಪಿಗಾಗಿ ಸ್ಮರಣ ಸಂಚಿಕೆಯನ್ನು ಇದೇ ಸಂದರ್ಭದಲ್ಲಿ ಅತಿಥಿಗಳು ಬಿಡುಗಡೆಗೊಳಿಸಿದರು.
ಸಭಾ ಕಾರ್ಯಕ್ರಮವನ್ನು ಸಿನಿಮಾ ನಟ ಹಾಗೂ ಶಿಕ್ಷಕರಾದ ನಾಗರಾಜ ಪದಕಣ್ಣಾಯ ಮತ್ತು ಶಿಕ್ಷಕರಾದ ಅರವಿಂದಕ್ಷ ಭಂಡಾರಿ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಮಕ್ಕಳಿಂದ ಹಾಗೂ ಊರವರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಾಂಸ್ಕೃತಿಕ ಕಾರ್ಯಕ್ರಮಗಳ ನಿರ್ವಹಣೆಯನ್ನು ಶಾಲಾ ಶಿಕ್ಷಕಿಯರಾದ ಮೋಹಿನಿ ಚಿಗುರುಪಾದೆ, ತ್ರೀಲತಾ ಡಿ., ಪೂರ್ಣಿಮಾ ಅಪ್ಪತಿಮಾರ್,ಪೂರ್ಣಿಮಾ,ಮೋಹಿನಿ ಬಿ.ಕೆ,ಲತಾ ಬಾಲಕೃಷ್ಣ ಶೆಟ್ಟಿ ಹಾಗೂ ಶಿಕ್ಷಕರಾದ ರಾಜೇಶ್ ಅವರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಬೆಳಿಗ್ಗೆ ಶಾಲಾ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವು ಸಂಜೆ ರಾಷ್ಟ್ರಗೀತೆಯೊಂದಿಗೆ ಸಮಾಪ್ತಿಗೊಂಡಿತು.
ವರದಿ : ವಿಜಯಕುಮಾರ್ ಶೆಟ್ಟಿ ಗಾಣದಮೂಲೆ

