ಕಾರ್ಕಳ : ಜೇಸಿ ಇಂಟರ್‌ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಶಾರದಾ ಮಾತೆಯ ಮೆರವಣಿಗೆಯೊಂದಿಗೆ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ, ತಿಲಕವಿಟ್ಟು, ಚಂಡೆ ಹಾಗೂ ಬ್ಯಾಂಡ್‌ಸೆಟ್‌ನ ನಾದದೊಂದಿಗೆ ಆತ್ಮೀಯ ಸ್ವಾಗತ ಕೋರಲಾಯಿತು.
ಕಾರ್ಯಕ್ರಮವನ್ನು ಲೋಕೋಪಯೋಗಿ ಇಲಾಖೆಯ ಪ್ರಥಮ ದರ್ಜೆ ಗುತ್ತಿಗೆದಾರರಾದ ವಾದಿರಾಜ್ ಶೆಟ್ಟಿ ಉದ್ಘಾಟಿಸಿದರು. ಅವರು ಮಾತನಾಡಿ, “ಜೇಸಿ ಶಾಲೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ಶಿಕ್ಷಣ ಸಂಸ್ಥೆಯಾಗಿದೆ. ಬಡತನವನ್ನು ಜೀವನದ ಅಡ್ಡಿಯಾಗಿಸಿಕೊಳ್ಳದೆ, ಉತ್ತಮ ಶಿಕ್ಷಣದ ಮೂಲಕ ಜೀವನದಲ್ಲಿ ಸಾಧನೆ ಮಾಡಬೇಕು. ಗಳಿಸಿದ ಸಂಪತ್ತನ್ನು ಉಳಿಸಿಕೊಳ್ಳುವ ಜಾಣ್ಮೆ ಮತ್ತು ಸಮಯಪ್ರಜ್ಞೆ ಪ್ರತಿಯೊಬ್ಬರಲ್ಲೂ ಇರಬೇಕು” ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ‘ಚರಿತ್ರೆ’ ಸಹಸಂಪಾದಕರಾದ ನಿತೀನ್ ಪೂಜಾರಿ ಮಾತನಾಡಿ, “ಸಂಸ್ಕೃತಿ ಮತ್ತು ಉತ್ತಮ ಕಲಿಕೆಗೆ ಅಡಿಪಾಯ ಹಾಕಿರುವ ಶಿಕ್ಷಣ ಸಂಸ್ಥೆ ಜೇಸಿ ಶಾಲೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನೆಲದ ಮೇಲೆ ಕುಳಿತುಕೊಳ್ಳುವ ಪದ್ಧತಿ ಉತ್ತಮ ಸಂಸ್ಕೃತಿಯ ಪ್ರತೀಕವಾಗಿದೆ. ಪುಸ್ತಕದ ಪಾಠದ ಜೊತೆಗೆ ಜೀವನ ಪಾಠವೂ ಅಷ್ಟೇ ಮುಖ್ಯ” ಎಂದು ಹೇಳಿದರು.
ಟ್ರಸ್ಟ್‌ನ ಪ್ರತಿನಿಧಿಯಾದ ಅರವಿಂದ್ ಪಿ.ಶೆಟ್ಟಿ ಮಾತನಾಡಿ, “ವಿದ್ಯಾರ್ಥಿಗಳು ಯಾವ ಸಾಧನೆ ಮಾಡಿದರೂ ತಂದೆ-ತಾಯಿ ಹಾಗೂ ಶಿಕ್ಷಕರಿಗೆ ಗೌರವ ನೀಡಬೇಕು. ನಮ್ಮ ಟ್ರಸ್ಟ್ ವತಿಯಿಂದ ಶಾಲಾ ದಿನದಂದು ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ (ಸ್ಕಾಲರ್‌ಶಿಪ್) ನೀಡಲಾಗುವುದು” ಎಂದು ಘೋಷಿಸಿದರು.
ಶಾಲೆಯ ಅಧ್ಯಕ್ಷರಾದ ಚಿತ್ತರಂಜನ್ ಶೆಟ್ಟಿ ಮಾತನಾಡಿ, “ಯಾವುದೇ ಶಾಲೆಯ 100% ಫಲಿತಾಂಶಕ್ಕೆ ಕೊನೆಯ ಸ್ಥಾನದಲ್ಲಿರುವ ವಿದ್ಯಾರ್ಥಿಯೂ ಕಾರಣನಾಗಿರುತ್ತಾನೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯ ಸಾಧನೆಯೂ ಮಹತ್ವದ್ದಾಗಿದೆ. ಶಾಲೆಯಲ್ಲಿ ಕಲಿತ ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಡಿ.ಆರ್ ಶಂಕರ್ ಪಿ. ಆಡಳಿತಾಧಿಕಾರಿ ಪ್ರನೀತ್ ಹಾಗೂ ಕಾರ್ಕಳ ಎಜುಕೇಶನ್ ಸೊಸೈಟಿ ಪ್ರತಿನಿಧಿ ಜಯಕುಮಾರ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ಸಕ್ರಿಯ ಭಾಗವಹಿಸುವಿಕೆಯಿಂದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಹೊಸ ಶೈಕ್ಷಣಿಕ ವರ್ಷವನ್ನು ಉತ್ಸಾಹ ಮತ್ತು ಸಂಭ್ರಮದೊಂದಿಗೆ ಸ್ವಾಗತಿಸಿದ ವಿದ್ಯಾರ್ಥಿಗಳಲ್ಲಿ ಹೊಸ ಕನಸುಗಳು ಮತ್ತು ಸಾಧನೆಯ ಸಂಕಲ್ಪಗಳು ಮೂಡಿದವು.

