ಮಂಗಳೂರು: ವಿದೇಶದಲ್ಲಿ ಹೆಚ್ಚಿನ ಸಂಬಳದ ಕೆಲಸದ ಆಮಿಷಕ್ಕೆ ಒಳಗಾಗಿ ಮಯನ್ಮಾರ್ನ ಚೀನಿ ಸೈಬರ್ ಗ್ಯಾಂಗ್ ಕೈಗೆ ಸಿಲುಕಿದ್ದ ಕರ್ನಾಟಕದ ಇಬ್ಬರು ಯುವಕರನ್ನು ಯಶಸ್ವಿಯಾಗಿ ರಕ್ಷಿಸಿ ತಾಯ್ನಾಡಿಗೆ ಕರೆತರಲಾಗಿದೆ. ಕರ್ನಾಟಕ ಸೈಬರ್ ಕಮಾಂಡ್, ಸೈಬರ್ ಕ್ರೈಮ್ ಕೋ-ಆರ್ಡಿನೇಷನ್ ಸೆಂಟರ್ (I4C), ಜಾರಿ ನಿರ್ದೇಶನಾಲಯ (ED) ಹಾಗೂ ಮಯನ್ಮಾರ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಜಂಟಿ ಕಾರ್ಯಾಚರಣೆಯ ಮೂಲಕ ಈ ರಕ್ಷಣಾ ಕಾರ್ಯ ನಡೆದಿದೆ.
ಕರ್ನಾಟಕ ಮೂಲದ ಯುವಕರಿಗೆ ಥೈಲ್ಯಾಂಡ್‌ನಲ್ಲಿ ಡೇಟಾ ಎಂಟ್ರಿ ಮತ್ತು ಕಂಪ್ಯೂಟರ್ ಸಂಬಂಧಿತ ಅತ್ಯುತ್ತಮ ಸಂಬಳದ ಉದ್ಯೋಗ ನೀಡುವುದಾಗಿ ಮಾನವ ಕಳ್ಳಸಾಗಣೆದಾರರು (Human Traffickers) ಆಮಿಷ ಒಡ್ಡಿದ್ದರು. ಆದರೆ, ಅಲ್ಲಿಗೆ ಕರೆದೊಯ್ದ ಬಳಿಕ ಯುವಕರನ್ನು ಅಕ್ರಮವಾಗಿ ಗಡಿ ದಾಟಿಸಿ ಮಯನ್ಮಾರ್ನಲ್ಲಿದ್ದ ‘ಚೀನೀ ಸೈಬರ್ ಸ್ಕ್ಯಾಮ್’ ಕೇಂದ್ರಕ್ಕೆ ತಳ್ಳಲಾಗಿತ್ತು. ಅಲ್ಲಿ ಈ ಯುವಕರ ಪಾಸ್‌ಪೋರ್ಟ್ ಹಾಗೂ ದಾಖಲೆಗಳನ್ನು ಕಸಿದುಕೊಂಡಿದ್ದ ಸಶಸ್ತ್ರ ಸಿಬ್ಬಂದಿ, ಜಾಗತಿಕ ಮಟ್ಟದಲ್ಲಿ ಆನ್‌ಲೈನ್ ಸೈಬರ್ ವಂಚನೆ (Cyber Fraud) ಹಾಗೂ ಕ್ರಿಪ್ಟೋ ಸ್ಕ್ಯಾಮ್‌ಗಳನ್ನು ಮಾಡುವಂತೆ ಅವರ ಮೇಲೆ ತೀವ್ರ ಒತ್ತಡ ಹೇರಿದ್ದರು. ಕೆಲಸ ಮಾಡಲು ನಿರಾಕರಿಸಿದರೆ ಮಾನಸಿಕ ಹಾಗೂ ಶಾರೀರಿಕ ಕಿರುಕುಳ ನೀಡಲಾಗುತ್ತಿತ್ತು ಎಂಬುದು ತಿಳಿದುಬಂದಿದೆ.
ಸಂತ್ರಸ್ತ ಯುವಕರು ಹೇಗೋ ಮಾಡಿ ತಮ್ಮ ಕುಟುಂಬಸ್ಥರನ್ನು ಸಂಪರ್ಕಿಸಿ ತಮಗಾಗುತ್ತಿರುವ ಅನ್ಯಾಯವನ್ನು ತಿಳಿಸಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಭಾರತೀಯ ರಾಯಭಾರ ಕಚೇರಿ (Indian Embassy) ಹಾಗೂ ವಿದೇಶಾಂಗ ಸಚಿವಾಲಯ (MEA), ಸ್ಥಳೀಯ ಅಧಿಕಾರಿಗಳ ನೆರವಿನಿಂದ ಕಾರ್ಯಾಚರಣೆ ನಡೆಸಿ ಯುವಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.

