ಕರಾವಳಿಗರ ಕನಸು ನನಸಾಗಲಿದೆ ; ಶೀಘ್ರವೇ ಬೆಂಗಳೂರು–ಮಂಗಳೂರು ವಂದೇ ಭಾರತ್ ಸಂಚಾರ..!

0
9

ಬೆಂಗಳೂರು: ಕರಾವಳಿ ಹಾಗೂ ರಾಜಧಾನಿ ಬೆಂಗಳೂರಿನ ನಡುವಿನ ಪ್ರಯಾಣಿಕರ ಬಹುಕಾಲದ ನಿರೀಕ್ಷೆಗೆ ಶೀಘ್ರದಲ್ಲೇ ತೆರೆ ಬೀಳಲಿದ್ದು, ಬೆಂಗಳೂರು–ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರ ಜೂನ್ 3ರಿಂದ ಆರಂಭವಾಗಲಿದೆ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವ V. Somanna ತಿಳಿಸಿದ್ದಾರೆ.

ಚಿಕ್ಕಮಗಳೂರಿನ ಅಜ್ಜಂಪುರದಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಸಕಲೇಶಪುರ–ಕುಕ್ಕೆ ಸುಬ್ರಹ್ಮಣ್ಯ ನಡುವಿನ 55 ಕಿ.ಮೀ. ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿರುವುದರಿಂದ ವಂದೇ ಭಾರತ್ ರೈಲು ಸಂಚಾರಕ್ಕೆ ದಾರಿ ಸುಗಮವಾಗಿದೆ ಎಂದು ಹೇಳಿದರು.

ಜೂನ್ 3ರಿಂದ ರೈಲಿನ ಪ್ರಾಯೋಗಿಕ ಓಟ ಆರಂಭವಾಗಲಿದ್ದು, ಮುಂದಿನ 15 ರಿಂದ 20 ದಿನಗಳಲ್ಲಿ ಪೂರ್ಣ ಪ್ರಮಾಣದ ವಾಣಿಜ್ಯ ಸಂಚಾರ ಆರಂಭವಾಗುವ ಸಾಧ್ಯತೆ ಇದೆ. ಈ ಕುರಿತು ಪ್ರಧಾನಿ Narendra Modi ಹಾಗೂ ರೈಲ್ವೆ ಸಚಿವ Ashwini Vaishnaw ಅವರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಸ್ತುತ ಕರ್ನಾಟಕದ 14 ಜಿಲ್ಲೆಗಳಲ್ಲಿ 12 ವಂದೇ ಭಾರತ್ ರೈಲುಗಳು ಸಂಚರಿಸುತ್ತಿದ್ದು, ಬೆಂಗಳೂರು–ಮಂಗಳೂರು ಮಾರ್ಗದ ರೈಲು ರಾಜ್ಯದ 13ನೇ ವಂದೇ ಭಾರತ್ ಸೇವೆಯಾಗಲಿದೆ.

ಇದೇ ವೇಳೆ, ಅರಸೀಕೆರೆ–ಬೆಂಗಳೂರು ನಡುವೆ ಮೆಮೋ ರೈಲು ಸೇವೆಯನ್ನು ಮುಂದಿನ 10 ರಿಂದ 15 ದಿನಗಳಲ್ಲಿ ಆರಂಭಿಸುವುದಾಗಿ ತಿಳಿಸಿದ ಸಚಿವರು, ಈ ಮಾರ್ಗದಲ್ಲಿ ಕೇವಲ ₹35 ದರ ನಿಗದಿಪಡಿಸಲಾಗಿದೆ ಎಂದರು.

ರಾಜ್ಯದ ರೈಲ್ವೆ ಅಭಿವೃದ್ಧಿ ಕುರಿತು ಮಾತನಾಡಿದ ಅವರು, 2026–27ನೇ ಸಾಲಿನಲ್ಲಿ ಕರ್ನಾಟಕಕ್ಕೆ ₹7,748 ಕೋಟಿ ರೈಲ್ವೆ ಅನುದಾನ ನೀಡಲಾಗಿದೆ ಎಂದು ತಿಳಿಸಿದರು. ರಾಜ್ಯದ 61 ರೈಲ್ವೆ ನಿಲ್ದಾಣಗಳಲ್ಲಿ ₹2,000 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಸುರಕ್ಷತೆಗಾಗಿ 835 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದರು.

LEAVE A REPLY

Please enter your comment!
Please enter your name here