ಪತ್ನಿಯನ್ನು ಬಸ್‌ಗೆ ಬೀಳ್ಕೊಟ್ಟು ಮನೆಗೆ ಬಂದ ಪತಿ ಮಾಡಿದ್ದು ಏನು..?

0
9

ಕಾಸರಗೋಡು : ಪತ್ನಿಯನ್ನು ಶಾಲೆಗೆ ತೆರಳಲು ಬಸ್‌ ಹತ್ತಿಸಿ ಮನೆಗೆ ಮರಳಿದ ಕೆಲವೇ ಹೊತ್ತಿನಲ್ಲಿ ಉದ್ಯಮಿ ಹಾಗೂ ಸಮಾಜ ಸೇವಕರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುಃಖದ ಘಟನೆ ವರದಿಯಾಗಿದೆ.

ಮೃತರನ್ನು ಕೆ.ಎನ್. ವೇಣು (52) ಎಂದು ಗುರುತಿಸಲಾಗಿದೆ. ಅವರು ಪನತ್ತಡಿ ವ್ಯಾಪಾರಿ-ವ್ಯವಸಾಯಿ ಸಮನ್ವಯ ಸಮಿತಿಯ ಮಾಜಿ ಅಧ್ಯಕ್ಷರಾಗಿದ್ದು, ಹಲವು ಸಾಮಾಜಿಕ ಹಾಗೂ ಸಾರ್ವಜನಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು.

ಸೋಮವಾರ ಬೆಳಿಗ್ಗೆ ಪತ್ನಿ ಸರಿತಾ ಅವರೊಂದಿಗೆ ಕಾರಿನಲ್ಲಿ ಮನೆಯಿಂದ ಹೊರಟಿದ್ದ ವೇಣು, ಪನತ್ತಡಿ ಬಸ್ ನಿಲ್ದಾಣದಲ್ಲಿ ಪತ್ನಿಯನ್ನು ಶಾಲೆಗೆ ತೆರಳುವ ಬಸ್‌ಗೆ ಹತ್ತಿಸಿ ಬೀಳ್ಕೊಟ್ಟಿದ್ದರು. ಬಳಿಕ ಮನೆಗೆ ಮರಳಿದ ಅವರು, ಮನೆಯ ಮೊದಲ ಮಹಡಿಯ ಬೆಡ್‌ರೂಂನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮನೆಗೆ ಬಂದ ತಂದೆ ಕಾಣಿಸದ ಹಿನ್ನೆಲೆಯಲ್ಲಿ ಪುತ್ರಿ ಅಂಜನಾ ಹುಡುಕಾಟ ನಡೆಸಿದಾಗ, ಬೆಡ್‌ರೂಂನಲ್ಲಿ ಶವ ಪತ್ತೆಯಾಗಿದೆ. ಈ ಘಟನೆ ಕುಟುಂಬ ಸದಸ್ಯರು ಹಾಗೂ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

ಕೆ.ಎನ್. ವೇಣು ಅವರು ಬಳಾಂತೋಡು ಶಾಲೆಯ ಮಾಜಿ ಪಿಟಿಎ ಅಧ್ಯಕ್ಷರಾಗಿಯೂ, ಕೋಳಿಚ್ಚಾಲ್ ಲಯನ್ಸ್ ಕ್ಲಬ್ ಪದಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೆ ಸಿಪಿಎಂ ಲೋಕಲ್ ಕಮಿಟಿ ಸದಸ್ಯರಾಗಿಯೂ ಗುರುತಿಸಿಕೊಂಡಿದ್ದರು.

ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ರಾಜಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here