ಸಂಭ್ರಮದ ಶಾಲಾ ಪ್ರಾರಂಭೋತ್ಸವ: ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

0
33

ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪೋಷಕರ ಪಾತ್ರ ಬಹುಮುಖ್ಯ” – ಹರೀಶ್ ಶೆಟ್ಟಿ ಹೋಯಿಗೆಮನೆ

ಕಡಂದಲೆ : ನೂತನ 2026-27ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವವು ಶಾಲಾ ಆವರಣದಲ್ಲಿ ಸೋಮವಾರದಂದು ಅತ್ಯಂತ ಸಂಭ್ರಮದಿಂದ ಜರುಗಿತು. ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸುವ ಮೂಲಕ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

ಈ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಬರೆಯುವ ಪುಸ್ತಕಗಳನ್ನು ‘ಮಹಮ್ಮಾಯಿ ಸಾಂಸ್ಕೃತಿಕ ಸೇವಾಸಮಿತಿ, ಸಚ್ಚೇರಿಪೇಟೆ’ ವತಿಯಿಂದ ಒದಗಿಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಮಿತಿಯ ಅಧ್ಯಕ್ಷರಾದ ಶ್ರೀಧರ ಗೌಡ ಹಾಗೂ ಸದಸ್ಯರಾದ ಶಶಿಕಾಂತ್ ಅವರು ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿ, ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಿದರು.

ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಹರೀಶ್ ಶೆಟ್ಟಿ ಹೋಯಿಗೆಮನೆ ಅವರು, “ಮಕ್ಕಳ ಶೈಕ್ಷಣಿಕ ಬೆಳವಣಿಗೆ ಮತ್ತು ಕಲಿಕೆಯಲ್ಲಿ ಕೇವಲ ಶಿಕ್ಷಕರಷ್ಟೇ ಅಲ್ಲದೆ ಪೋಷಕರ ಪಾತ್ರವೂ ಅಷ್ಟೇ ಪ್ರಮುಖವಾಗಿರುತ್ತದೆ. ಪೋಷಕರು ಜವಾಬ್ದಾರಿಯುತವಾಗಿ ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸಿಕೊಡಬೇಕು” ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಕಾರ್ಯದರ್ಶಿ ನಾಗರಾಜ್ ಪೂಜಾರಿ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (SDMC) ಉಪಾಧ್ಯಕ್ಷರಾದ ವಸಂತ್ ಪೂಜಾರಿ ಹಾಗೂ SDMC ಸದಸ್ಯರಾದ ದಯಾನಂದ ನಾಯಕ್ ಅವರು ಉಪಸ್ಥಿತರಿದ್ದರು.

ಹರೀಶ್ ಶೆಟ್ಟಿ ಹೋಯಿಗೆಮನೆ ಮತ್ತು ರಾಘು ಪುರುಷ ಅವರು ಉಪಹಾರದ ವ್ಯವಸ್ಥೆಯನ್ನು ಮಾಡಿದ್ದರು. ನಾಗರಾಜ್ ಪೂಜಾರಿ ಮತ್ತು ದಯಾನಂದ ನಾಯಕ್ ಅವರು ಸಿಹಿ ತಿಂಡಿ ಒದಗಿಸಿ ಸಹಕರಿಸಿದರು.

ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಹಾಗೂ ಸಹಕರಿಸಿದ ಎಲ್ಲ ದಾನಿಗಳಿಗೆ ಮತ್ತು ಪೋಷಕರಿಗೆ ಶಾಲಾ ಆಡಳಿತ ಮಂಡಳಿಯು ಈ ಸಂದರ್ಭದಲ್ಲಿ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸಿತು. ಕಾರ್ಯಕ್ರಮವನ್ನು ಶಿಕ್ಷಕ ಶರಣಯ್ಯ ನಿರೂಪಿಸಿದರು, ಮುಖ್ಯ ಶಿಕ್ಷಕಿ ಲಿಡಿಯ ಸೆರವೋ ಸ್ವಾಗತಿಸಿದರು, ಶಿಕ್ಷಕಿ ಎಲಿಜಾ ಪೌಲಿನ್ ವಂದಿಸಿದರು

LEAVE A REPLY

Please enter your comment!
Please enter your name here